ಬೂದಗುಂಪ ಗ್ರಾಮಕ್ಕೆ ಬಸ್ ನಿಲುಗಡೆ ಹಾಗೂ ಬಸ್ ತಂಗುದಾಣ ನಿರ್ಮಿಸವಂತೆ ಬಸ್‌ಗಳನ್ನು ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳ ಸ್ವಯಂ ಪ್ರೇರಿತ ಹೋರಾಟಕ್ಕೆ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ಬೆಂಬಲ ನೀಡಿತು.
ಕೊಪ್ಪಳ ತಾಲೂಕಿನ ಬೂದಗುಂಪ ಗ್ರಾಮದಿಂದ ನಗರದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬಹಳ ಮಂದಿ ಇದ್ದಾರೆ. ಸರಿಯಾದ ಬಸ್ ತಂಗುದಾಣ ಇಲ್ಲದಿರುವುದರಿಂದ ಬಸ್ಸುಗಳು ನಿಲ್ಲಿಸದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆ ಗ್ರಾಮದ ವಿದ್ಯಾರ್ಥಿಗಳು ಬಸ್ ನಿಲ್ಲಿಸಿ ಸುಮಾರು 3 ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟಿಸಿ ಸಾರಿಗೆ ಸಂಸ್ಥೆಯ ಮೇಲ್ವಿಚಾರಕ ಮಂಜುನಾಥ ಹಾಗೂ ಗ್ರಾಮದ ಪಿಡಿಒಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿನಿ ಭಾಗ್ಯಶ್ರೀ ಮಾತನಾಡಿ, “ಪ್ರತಿನಿತ್ಯ ಶಾಲಾ-ಕಾಲೇಜುಗಳಿಗೆ ತೆರಳುವ ನಮಗೆ ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಬಸ್ ನಿಲುಗಡೆ ಆಗದೇ ತಡೆರಹಿತವಾಗಿ ಚಲಿಸುತ್ತವೆ. ಇದರಿಂದ ದಿನನಿತ್ಯ ನಮಗೆ ತೊಂದರೆಯಾಗಿದೆ” ಎಂದು ಆಕ್ರೋಶಗೊಂಡರು.
ಹಿಂದೊಮ್ಮೆ ವಿದ್ಯಾರ್ಥಿನಿ ಬಸ್ಸಿನಿಂದ ಕೆಳಗೆ ಬಿದ್ದರೂ ಬಸ್ ಚಾಲಕನು ಹಾಗೆಯೇ ಬಸ್ ಚಾಲನೆ ಮಾಡಿಕೊಂಡು ಹೋದ ಘಟನೆ ನಡೆದಿದೆ. ವಯೋವೃದ್ಧರು, ಸಣ್ಣ ಮಕ್ಕಳು ಮತ್ತು ವಿದ್ಯಾರ್ಥಿಗಳು ಬಿಸಿಲಿನಲ್ಲಿ ನಿಂತು ಬಸ್ಸಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ಘಟನೆಗಳಿಂದ ಕುಪಿತಗೊಂಡಂತ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಬಸ್ ತಡೆದು ಪ್ರತಿಭಟಿಸುತ್ತಿದ್ದಾರೆ.
ಇದನ್ನೂ ಓದಿ: ಕೊಪ್ಪಳ | 62 ದಿನಗಳ ಕಾಲ 1,550 ಕಿ.ಮೀ. ಏಕಾಂಗಿ ಪಾದಯಾತ್ರೆ ನಡೆಸಿದ ಹನುಮೇಶ
ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಮುಖಂಡ ತುಳಜಾ ರಾಮ್ ಹಾಗೂ ಸಿಂಧು ಕೌದಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಬೆಂಬಲಿಸಿ ಮಾತನಾಡಿ, “ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಇಚಲಕರಂಜಿ, ಹುಬ್ಬಳ್ಳಿ, ಕಾರವಾರ, ಸಿಂಧನೂರು ಮತ್ತು ರಾಯಚೂರು ಸೇರಿದಂತೆ ಬೂದಗುಂಪ ಮಾರ್ಗವಾಗಿ ಚಲಿಸುವ ಬಸ್ಸುಗಳನ್ನು ನಿಲುಗಡೆ ಮಾಡಬೇಕು. ಬೂದುಗುಂಪದಲ್ಲಿ ಎರಡು ಕಡೆ ಬಸ್ ತಂಗುದಾಣವನ್ನು ನಿರ್ಮಿಸಬೇಕು” ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳಾದ ಭಾಗ್ಯಶ್ರೀ, ಮಂಜವ್ವ, ಕವಿತಾ, ಕೀರ್ತನ, ಪವಿತ್ರ, ಹನುಮಂತಿ, ಶಶಿಕಲಾ, ಅಕ್ಷತಾ, ಕರಿಯಮ್ಮ, ನಫೀಜ, ಕರಿಯಣ್ಣ, ಮಲ್ಲಿಕಾರ್ಜುನ, ದೀಪಿಕಾ, ಬಸಮ್ಮ, ರೇಣುಕಾ, ಭೀಮಶ್ರೀ, ಸೌಂದರ್ಯ, ಲಕ್ಷ್ಮಿ, ರೈತ ಸಂಘಟನೆಯ ಹನುಮಂತಪ್ಪ, ಫಕೀರಪ್ಪ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.





