ಕೊಪ್ಪಳದ ಗಂಗಾವತಿ ನಗರದಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಕೆ ವೆಂಕಟೇಶ್ ಅವರ ಭೀಕರ ಹತ್ಯೆ ಪ್ರಕರಣವು ಪಟ್ಟಣವನ್ನೇ ಬೆಚ್ಚಿ ಬೀಳಿಸಿತ್ತು. ಎಂದಿನಂತೆ ಇದೊಂದು ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಡಬಹುದಾದ ಘಟನೆಯಾಗುವುದೆಂದು ಭಾವಿಸಲಾಗಿತ್ತು. ಆದರೆ, ತನಿಖೆಯಿಂದ ಹೊರಬಿದ್ದ ಸತ್ಯಾಂಶಗಳು ಈ ಆತಂಕವನ್ನು ತಣ್ಣಗಾಗಿಸಿವೆ.
ಕೊಲೆಗೆ ಸಂಚು ರೂಪಿಸಿದ 6 ಆರೋಪಿಗಳಲ್ಲಿ ಒಬ್ಬ ಮುಸ್ಲಿಂ ಯುವಕ, ಉಳಿದ ಐವರು ಹಿಂದೂ ಯುವಕರೇ ಆಗಿದ್ದು, ಮುಖ್ಯ ಆರೋಪಿಯಾದ ರವಿ ಹಾಗೂ ಹತ್ಯೆಯಾದ ವೆಂಕಟೇಶ್ ಇಬ್ಬರೂ ಒಂದೇ ಜಾತಿ ಮತ್ತು ಧರ್ಮದವರಾಗಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ಸ್ಪಷ್ಟವಾಗಿದೆ. ಇದರ ಫಲವಾಗಿಯೇ ಈ ಘಟನೆಯನ್ನು ಧರ್ಮದ ಲೇಪನ ಹಚ್ಚಿ, ಕೋಮು ಸಂಘರ್ಷದ ಪ್ರಯತ್ನಗಳು ಸಂಪೂರ್ಣ ವಿಫಲವಾಗಿವೆ.
ಒಂದು ವೇಳೆ ಈ ಪ್ರಕರಣದಲ್ಲಿ ಆರೋಪಿಗಳೆಲ್ಲಾ ಮುಸ್ಲಿಂ ಸಮುದಾಯದವರಾಗಿದ್ದರೆ, ಅಥವಾ ಕೊಲೆ ಸಂಚು ರೂಪಿಸಿದವ ಮುಸ್ಲಿಂ ಯುವಕನಾಗಿದ್ದರೆ, ಗಂಗಾವತಿ ಇಂದು ಸಂಪೂರ್ಣ ಬೇರೆ ಮುಖ ತೋರಿಸುತ್ತಿತ್ತು. ನಗರದ ಬೀದಿಗಳಲ್ಲಿ ಪ್ರತಿಭಟನೆಗಳು, ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿತನದ ಪೋಸ್ಟ್‌ಗಳು, ಹಾಗೂ ಕೆಲವು ಅತಿವಾದಿ ಸಂಘಟನೆಗಳ ಭಾವನಾತ್ಮಕ ರಾಜಕೀಯ ಭಾಷಣಗಳು ಗಂಗಾವತಿಯ ಶಾಂತ ವಾತಾವರಣವನ್ನು ಸುಡುವಂತಾಗುತ್ತಿತ್ತು ಎಂಬುದು ಎಲ್ಲರ ಅಂದಾಜು. ಆದರೆ ಈ ಬಾರಿ, ಪರಿಸ್ಥಿತಿ ತಲೆಕೆಳಗಾಗಿದೆ. ಆರೋಪಿಗಳಲ್ಲಿ ಒಬ್ಬ ಯುವಕ ಮುಸ್ಲಿಂ ಆಗಿದ್ದರೂ, ಉಳಿದ ಐವರು ಹಿಂದು ಸಮುದಾಯದವರೇ ಆಗಿರುವುದರಿಂದ ಧಾರ್ಮಿಕ ರಾಜಕೀಯದ ನಾಟಕ ನಡೆಯಲಿಲ್ಲ. ಹತ್ಯೆಯಾದ ವೆಂಕಟೇಶ್ ಹಾಗೂ ಕೊಲೆ ಸಂಚು ರೂಪಿಸಿದ ರವಿ ಇಬ್ಬರೂ ಒಂದೇ ಧರ್ಮದವರಾಗಿರುವುದರಿಂದ, ಕೋಮುವಾದಿಗಳಿಗೆ ನಿರಾಸೆಯಾಗಿರಲೂಬಹುದು!
ಪ್ರಾರಂಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹತ್ಯೆಯ ವಿಚಾರ ಹರಿದಾಡುತ್ತಿದ್ದಂತೆಯೇ ಕೆಲವು ವಲಯಗಳು ಧಾರ್ಮಿಕ ಬಣ್ಣ ಹಚ್ಚುವ ಯತ್ನ ಮಾಡಿದ್ದವು. ಆದರೆ ಘಟನೆಗೆ ಸಂಬಂಧಿಸಿದ ನಿಖರ ಮಾಹಿತಿ ಹೊರಬಿದ್ದಾಗ ಆ ಪ್ರಯತ್ನಗಳು ತಕ್ಷಣ ಸುಮ್ಮನಾದವು. ʼಇದು ಬೇರೆ ಧರ್ಮದವರ ಕೃತ್ಯವಾಗಿದ್ದರೆ, ಗಂಗಾವತಿಯಲ್ಲಿ ದೊಡ್ಡದೊಂದು ಕೋಮು ಗಲಭೆ ಉಂಟಾಗುತ್ತಿದ್ದರೂ ಅಚ್ಚರಿಯಿಲ್ಲʼ ಎಂದು ಸ್ಥಳೀಯ ಪ್ರಗತಿಪರರು ಅಭಿಪ್ರಾಯಪಟ್ಟಿದ್ದಾರೆ.
ವೆಂಕಟೇಶ್ ಮತ್ತು ರವಿ ಇಬ್ಬರೂ ಬಿಜೆಪಿ ಪಕ್ಷದ ಯುವ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಆಗಾಗ ಪರಸ್ಪರ ಹತ್ತಿರರಾಗಿರುವಂತೆಯೂ ಬಿಂಬಿಸಿಕೊಳ್ಳುತ್ತಿದ್ದರು. ಆದರೆ ಪಕ್ಷದ ಒಳರಾಜಕೀಯ, ಪ್ರಭಾವದ ಹೋರಾಟ ಹಾಗೂ ವೈಯಕ್ತಿಕ ಅಸಮಾಧಾನಗಳಿಂದ ಅವರ ನಡುವಿನ ಸಂಬಂಧದಲ್ಲಿ ಬಿರುಕು ಬಿದ್ದಿತ್ತು ಎಂದು ಹತ್ತಿರದಿಂದ ಬಲ್ಲವರು ಹೇಳುತ್ತಿದ್ದರು. ಆರೋಪಿ ರವಿ, ಇತ್ತೀಚಿನ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಗಾಲಿ ಜನಾರ್ಧನ ರೆಡ್ಡಿಯವರ ವಲಯದಲ್ಲಿ ಗುರುತಿಸಿಕೊಂಡರೆ, ಮೃತ ವೆಂಕಟೇಶ್ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರ ಆಪ್ತ ವಲಯದಲ್ಲಿ ಸಕ್ರಿಯರಾಗಿದ್ದರು ಎಂದು ಮೂಲಗಳು ಹೇಳುತ್ತವೆ. ಈ ಇಬ್ಬರ ರಾಜಕೀಯ ಬಣಗಳ ಮಧ್ಯೆ ನಡೆದ ಒಳ ಗಲಾಟೆಯೇ ಈ ಇಬ್ಬರ ವೈಮನಸ್ಸಿಗೆ ಕಾರಣವಾಗಿದೆ ಎನ್ನಲಾಗಿದೆ.
ಗಂಗಾವತಿ ನಗರದಲ್ಲಿನ ಬಿಜೆಪಿ ಯುವ ವಲಯದಲ್ಲಿ ಹಲವು ಬಣಗಳು ಕ್ರಿಯಾಶೀಲವಾಗಿದ್ದು, ಯುವ ಮುಖಂಡತ್ವದ ಆಕಾಂಕ್ಷೆಯಿಂದ ಒಳ ಸಂಘರ್ಷಗಳು ಹೆಚ್ಚಾಗಿರುವುದನ್ನು ಈ ಹತ್ಯೆ ಪ್ರಕರಣ ಮತ್ತೊಮ್ಮೆ ಹೊರಹಾಕಿದೆ. ವೆಂಕಟೇಶ್ ಹತ್ಯೆಯಿಂದ ಸ್ಥಳೀಯ ರಾಜಕೀಯದಲ್ಲಿ ನಡುಕ ಉಂಟಾಗಿದೆ ಮತ್ತು ಪಕ್ಷದೊಳಗಿನ ಬಿಕ್ಕಟ್ಟುಗಳ ಕುರಿತು ಚರ್ಚೆಗಳು ಗರಿಗೆದರಿವೆ.
ಗಂಗಾವತಿಯಲ್ಲಿ ಗ್ಯಾಬ್ಲಿಂಗ್ ದಂಧೆ: ಗಂಗಾವತಿಯಲ್ಲಿ ಸುಮಾರು ವರ್ಷಗಳಿಂದ ಜೂಜು, ಮಟ್ಕಾ ಹಾಗೂ ಗಾಂಜಾದಂತ ಕಾನೂನು ಬಾಹಿರ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಇದಕ್ಕೆ ಹಲವು ಕಟ್ಟುನಿಟ್ಟಿನ ಕಾನೂನುಗಳು ಇದ್ದರೂ, ಪೊಲೀಸ್ ಇಲಾಖೆಯಿಂದ ಕಡಿವಾಣ ಹಾಕಲು ಸಾಧ್ಯವಾಗದೇ ಇರುವುದು ಟೀಕೆಗೆ ಗುರಿಯಾಗಿದೆ. ಇಂತಹ ಚಟುವಟಿಕೆಗಳು ಕೊಪ್ಪಳ ಜಿಲ್ಲೆಯಲ್ಲೇ ಅತಿ ಹೆಚ್ಚು ಎನ್ನಲಾಗುತ್ತಿದೆ. ನಗರದ ಹೊರವಲಯದಲ್ಲಿ ಜಾಲಿ ಕಂಟೆಗಳಿಂದ ತುಂಬಿದ ಪಾಳು ಬಿದ್ದ ಹೊಲ, ತೋಟದ ಮನೆ, ಹಳ್ಳ ಹಾಗೂ ನಿರ್ಜನವಾದ ಪ್ರದೇಶಗಳು ಇಸ್ಪೀಟು ಹಾಗೂ ಮಟ್ಕಾದಂತ ಜೂಜಾಟಗಳ ಕೇಂದ್ರಗಳಾಗಿವೆ. ಇಲಾಖೆ ಮಾತ್ರ ಸುಮ್ಮನಿದ್ದು, ಸುತ್ತ ಮುತ್ತಲ ಗ್ರಾಮಸ್ಥರನ್ನು ಸಂಕಷ್ಟಕ್ಕೆ ಗುರಿ ಮಾಡಿದೆ ಎನ್ನುತ್ತಾರೆ ಸಾರ್ವಜನಿಕರು.



ಇಬ್ಬರ ವೈಷಮ್ಯಕ್ಕೆ ಮೂಲವಾದುದು ಕೇವಲ ರಾಜಕೀಯವೇ ಅಲ್ಲ, ಜೂಜಾಟವೂ ಕಾರಣ ಎಂದು ಸ್ಥಳೀಯ ಮೂಲಗಳು ಹೇಳುತ್ತಿವೆ. ಕೊಲೆಯಾದ ವೆಂಕಟೇಶ್ ಹಾಗೂ ಕೊಲೆ ಸಂಚು ರೂಪಿಸಿದ ರವಿ ಈ ಮೊದಲು ಆತ್ಮೀಯ ಸ್ನೇಹಿತರಾಗಿದ್ದರು. ಇಬ್ಬರೂ ಗಂಗಾವತಿ ನಗರ ಹೊರವಲಯದ ಒಂದು ಪ್ರತ್ಯೇಕ, ಪೊಲೀಸರ ಹಾಗೂ ಸಾರ್ವಜನಿಕರ ಕಣ್ಗಳಿಂದ ದೂರವಾದ ಸ್ಥಳಗಳಲ್ಲಿ ಯುವಕರನ್ನು ಸೇರಿಸಿ ಜೂಜಾಟ ಮತ್ತು ಮಟ್ಕಾ ಆಟಗಳನ್ನು ನಡೆಸುತ್ತಿದ್ದರೆಂದು ಮೂಲಗಳು ಹೇಳುತ್ತಿವೆ. ಸುಮಾರು ಎರಡು–ಮೂರು ವರ್ಷಗಳಿಂದ ಈ ದಂಧೆಯಲ್ಲಿ ಲಾಭದ ಹಂಚಿಕೆ, ಹಣದ ವ್ಯವಹಾರ ಮತ್ತು ಪ್ರಭಾವದ ವಿಚಾರದಲ್ಲಿ ಇಬ್ಬರ ನಡುವೆ ಅನೇಕ ಬಾರಿ ಅಸಮ್ಮತಿ ಉಂಟಾಗಿದೆ. ಬಳಿಕ ಸಣ್ಣಪುಟ್ಟ ವಾಗ್ವಾದಗಳು ಗಂಭೀರ ವೈರಕ್ಕೆ ತಿರುಗಿ, ಸ್ನೇಹಿತರು ಶತ್ರುಗಳಾದರು. “ಜೂಜಾಟದ ಹಣ ಹಾಗೂ ಅದರಿಂದ ಬಂದ ವೈಮನಸ್ಯವೇ ಈ ಹತ್ಯೆಯ ಪ್ರಮುಖ ಕಾರಣವಾಗಿರಬಹುದು” ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸ್ಥಳೀಯ ಯುವಕನೊಬ್ಬ ತಿಳಿಸಿದ್ದಾರೆ.
ಮಾರುತಿ ಸಲಗಾ ಎಂಬ ಯುವಕನ ಮೇಲಿನ ಹಲ್ಲೆ ಪ್ರಕರಣದಲ್ಲಿ ರವಿ ಮತ್ತು ತಂಡದ ಮೇಲೆ ವೆಂಕಟೇಶ್ ಪ್ರಕರಣ ದಾಖಲಾಗುವಂತೆ ಮಾಡಿದ್ದನಂತೆ. ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ರವಿ ಆಗಾಗ ವಾಟ್ಸಾಪ್ ಹಾಗೂ ಫೋನ್ ಕರೆ ಮೂಲಕ ಹತ್ಯೆಯಾದ ವೆಂಕಟೇಶ್‌ಗೆ ಬೆದರಿಕೆ ಹಾಕುತ್ತಿದ್ದನಂತೆ. ಈ ಕುರಿತು ವೆಂಕಟೇಶ ಪೊಲೀಸರ ಗಮನಕ್ಕೆ ತಂದಿದ್ದ. ರವಿ ಮಾತಾಡಿರುವ ಆಡಿಯೋ ರೆಕಾರ್ಡಿಂಗ್ ಕೂಡ ಪೊಲೀಸರಿಗೆ ಕೊಟ್ಟಿದ್ದ. ಆದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಇಲಾಖೆಯ ಸಂಪೂರ್ಣ ವೈಫಲ್ಯ ಎಂದು ಕೊಲೆಯಾದ ವೆಂಕಟೇಶ್‌ನ ಸ್ನೇಹಿತರು ಹೇಳುತ್ತಾರೆ.
ವೆಂಕಟೇಶ್‌ರವರ ಸ್ನೇಹಿತ ರಾಮು ಮಾಧ್ಯಮಗಳೊಂದಿಗೆ ಮಾತನಾಡಿ, ʼನಾವು ಎಲ್ಲರೂ ಜೊತೆಯಾಗಿ ಊಟಕ್ಕೆ ಹೋಗಿದ್ದೆವು. ವಾಪಸ್ ಬರುತ್ತಿದ್ದಾಗ ಏಳೆಂಟು ಮಂದಿ ಮಾರಕಾಸ್ತ್ರಗಳೊಂದಿಗೆ ಬಂದು ನಮ್ಮ ಮೇಲೆ ದಾಳಿ ಮಾಡಿದರು. ಅವರು ಬೆದರಿಸಿ, ನಮ್ಮನ್ನು ಓಡಿಸಿದರುʼ ಎಂದು ತಿಳಿಸಿದ್ದಾರೆ.
ಕೊಲೆಯಾದ ವೆಂಕಟೇಶ್‌ನ ತಂದೆ ಹಂಪನಯ್ಯ ಜಂಟಕಲ್ ಮಾತನಾಡಿ, “2023ರಿಂದಲೇ ನಮ್ಮ ಮಗನಿಗೆ ಜೀವ ಭಯ ಹಾಗೂ ಬೆದರಿಕೆ ಇತ್ತು. 2023ರಲ್ಲಿ ಅಮರ್ ಭಗತ್ ಸಿಂಗ್ ನಗರ ಪ್ರದೇಶದ ಮಾರುತಿ ಸಲಗಾ ಎಂಬ ಹುಡುಗನ ಮೇಲೆ ಲಿಂಗರಾಜ್ ಕ್ಯಾಂಪ್‌ನ ರವಿ ಮತ್ತು ಅವನ ಸಹಚರರು ದಾಳಿ ನಡೆಸಿದ್ದರು. ಮಾರುತಿ ಹಾಗೂ ನನ್ನ ಮಗ ವೆಂಕಟೇಶ ಸ್ನೇಹಿತರಾಗಿದ್ದರು. ಆ ಸಂದರ್ಭದಲ್ಲಿ ನನ್ನ ಮಗ ಅವನನ್ನು ಹುಬ್ಬಳ್ಳಿಯ ಸೆಕೂರ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ವ್ಯವಸ್ಥೆ ಮಾಡಿದ್ದನು. ಅಲ್ಲದೆ, ರವಿ ಅವರ ಅಳಿಯರಾದ ಭೀಮ, ಆಕಾಶ್, ಇಂದ್ರೇಶಾ ಮತ್ತು ವೀರೇಶ್ ಇವರೇ ದಾಳಿಕೋರರು ಎಂದು ಗುರುತಿಸಿ ನನ್ನ ಮಗನೇ ಪೊಲೀಸರಿಗೆ ಮಾಹಿತಿ ನೀಡಿದ್ದನು. ಅವರ ಬಂಧನಕ್ಕೂ ಕಾರಣನಾಗಿದ್ದನು. ಆ ನಂತರ ರವಿ ಮತ್ತು ಅವನ ಸಹಚರರು ನಗರ ಬಿಟ್ಟು ಪರಾರಿಯಾಗಿದ್ದರು. 2024ರಲ್ಲಿ ರವಿ ನನ್ನ ಮಗನಿಗೆ ವಾಟ್ಸಾಪ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿ, ಒಂದು ವಾರದೊಳಗೆ ಕೊಲ್ಲುವುದಾಗಿ ಹೇಳಿದ್ದ. ಅದಕ್ಕೆ ನನ್ನ ಮಗ ತಕ್ಷಣವೇ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಆ ನಂತರದಿಂದಲೇ ಅವನು ಯಾವಾಗಲೂ ಎಚ್ಚರಿಕೆಯಿಂದ ಇರ್ತಿದ್ದ. ಸ್ನೇಹಿತರ ಜೊತೆಗೇ ತಂಗುತ್ತಿದ್ದ, ಒಬ್ಬನೇ ಹೊರಗೆ ಹೋಗುವುದನ್ನು ತಪ್ಪಿಸುತ್ತಿದ್ದ” ಎಂದು ಹೇಳಿದ್ದಾರೆ.



ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಮಾತನಾಡಿ, “ಹಳೆಯ ವೈಷಮ್ಯವೇ ಈ ಹತ್ಯೆಗೆ ಕಾರಣವಾಗಿರಬಹುದು. 2023ರಲ್ಲಿ ವೆಂಕಟೇಶ್ ತನ್ನ ಸ್ನೇಹಿತನ ಪ್ರಕರಣದಲ್ಲಿ ಪೊಲೀಸರಿಗೆ ಸಹಾಯ ಮಾಡಿ ಆರೋಪಿಗಳನ್ನು ಬಂಧಿಸಲು ನೆರವಾಗಿದ್ದರು. ಆ ಘಟನೆಯ ನಂತರದಿಂದಲೇ ವೆಂಕಟೇಶ್ ಮತ್ತು ರವಿ ಎಂಬ ವ್ಯಕ್ತಿಯ ನಡುವೆ ಗಂಭೀರ ವೈಮನಸ್ಸು ಇತ್ತು. ಆ ವೈಷಮ್ಯದಿಂದಲೇ ರವಿ ಮತ್ತು ಆತನ ತಂಡ ಈ ಹತ್ಯೆ ನಡೆಸಿದ್ದಾರೆ ಎನ್ನುವುದು ನಮ್ಮ ಶಂಕೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಸಂವಿಧಾನ ಬದಲಿಸುವ ಸನಾತನಿಗಳ ಹುನ್ನಾರಕ್ಕೆ ವಕೀಲರೇ ದಾಳ
ಅಂತೂ ಗಂಗಾವತಿಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ವೆಂಕಟೇಶ್ ಅವರ ಹತ್ಯೆ ಧಾರ್ಮಿಕ ಕೋನಕ್ಕೆ ತಿರುಗದೆ ಉಳಿದಿರುವುದು ನಗರ ಹಾಗೂ ಜಿಲ್ಲೆಯ ಜನರಿಗೆ ಒಂದು ರೀತಿಯ ನೆಮ್ಮದಿ ತಂದಿದೆ. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಭಾವನೆಗಳ ಹೆಸರಿನಲ್ಲಿ ಅಲ್ಪ ವಿಚಾರಕ್ಕೂ ಬೆಂಕಿ ಹಚ್ಚಿ ರಾಜಕೀಯ ಲಾಭ ಪಡೆಯುವ ಪ್ರಯತ್ನಗಳು ಹೆಚ್ಚಾಗಿರುವ ಸಂದರ್ಭದಲ್ಲಿ, ಈ ಪ್ರಕರಣದಲ್ಲಿ ಸತ್ಯಾಂಶವೇ ಧರ್ಮದ ಹೆಸರಿನಲ್ಲಿ ವಿಷ ಬೀಜ ಬಿತ್ತುವವರ ಬಾಯಿಗೆ ಬೀಗ ಹಾಕಿದಂತಾಗಿದೆ.
ಹತ್ಯೆಯಾದ ಯುವಕ ಮತ್ತು ಕೊಲೆ ಸಂಚು ರೂಪಿಸಿದವರು ಇಬ್ಬರೂ ಒಂದೇ ಧರ್ಮದವರಾಗಿದ್ದರಿಂದ, ಘಟನೆಗೆ ರಾಜಕೀಯ ಬಣ್ಣ ಹಚ್ಚುವ ಅವಕಾಶವೇ ಸಿಕ್ಕಿಲ್ಲ. ಇಲ್ಲದಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹಚ್ಚಿ, ಕೋಮು ಸಂಘಟನೆಗಳು ತಮ್ಮ ಅಜೆಂಡಾ ಮುನ್ನಡೆಸಲು ಪ್ರಯತ್ನಿಸಿ, ರಾಜಕೀಯ ನಾಯಕರು ಸಹ ಆ ಕಿಚ್ಚಿನಲ್ಲಿ ರಾಜಕೀಯ ರೊಟ್ಟಿ ಬೇಯಿಸಿಕೊಳ್ಳುತ್ತಿದ್ದರೆ ಅಚ್ಚರಿಯೇನಿಲ್ಲ. ಆದರೆ ಈ ಬಾರಿ, ಗಂಗಾವತಿಯ ಜನರು ಶಾಂತಿಯುತವಾಗಿ ವಿಚಾರವನ್ನು ಸ್ವೀಕರಿಸಿ ಧರ್ಮಕ್ಕಿಂತ ಸತ್ಯಕ್ಕೂ ನ್ಯಾಯಕ್ಕೂ ಆದ್ಯತೆ ನೀಡಿರುವುದು ಶ್ಲಾಘನೀಯ.
ಸ್ಥಳೀಯ ವಲಯದಲ್ಲಿ ಈ ಪ್ರಕರಣ ರಾಜಕೀಯ ವೈಮನಸ್ಯ ಮತ್ತು ಅಕ್ರಮ ಚಟುವಟಿಕೆಗಳ ಅಪಾಯಕಾರಿ ಪರಿಣಾಮಗಳ ಕುರಿತು ಚಿಂತನೆಗೆ ಕಾರಣವಾಗಿದೆ. ರಾಜಕೀಯದಲ್ಲಿಯೂ, ಸಮಾಜದಲ್ಲಿಯೂ ಯುವಕರು ಅಧಿಕಾರದ ಹಂಬಲಕ್ಕಿಂತ ಬದ್ಧತೆ ಮತ್ತು ನೈತಿಕತೆಯ ಮಾರ್ಗವನ್ನು ಆರಿಸಬೇಕೆಂಬ ಸಂದೇಶವನ್ನು ಈ ಘಟನೆ ಬಲವಾಗಿ ನೀಡುತ್ತದೆ. ಅಂತಿಮವಾಗಿ, ಗಂಗಾವತಿ ನಗರದ ಜನತೆ ಒಂದು ಭಯಾನಕ ಘಟನೆಯಿಂದ ನಡುಗಿದ್ದರೂ, ಧರ್ಮ ದ್ವೇಷದ ಹೋರಾಟಕ್ಕೆ ತಿರುಗದಿರುವುದು ನಿಜಕ್ಕೂ ಸಮಾಧಾನಕರ ಸಂಗತಿ.





