ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಡಿದ ಮಾತಿನಂತೆ ನಡೆದುಕೊಂಡು ಅಂತರಧರ್ಮೀಯ ವಿವಾಹಕ್ಕೆ 5 ಲಕ್ಷ ಕೊಟ್ಟು ಅಭಿಯಾನ ಆರಂಭಿಸಬೇಕು. ಇಲ್ಲವಾದಲ್ಲಿ ಅವರನ್ನು ಆಧುನಿಕ ಭಾರತದ ಉತ್ತರ ಕುಮಾರ ಎಂದು ಕರೆಯಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಸುರೇಶ ದಾಸರೆಡ್ಡಿ ಆಗ್ರಹಿಸಿದರು.
ಕೊಪ್ಪಳ ನಗರದ ಮೀಡಿಯಾ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, “ಬಿಜೆಪಿ ಉಚ್ಚಾಟಿತ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳರವರು ಈ ಹಿಂದೆ ಕೊಪ್ಪಳಕ್ಕೆ ಬಂದಾಗ ʼಹಿಂದೂ ಯುವಕರು ಮುಸ್ಲಿಂ ಹುಡುಗಿಯರನ್ನು ಮದುವೆಯಾದರೆ ಐದು ಲಕ್ಷ ರೂಪಾಯಿ ಕೊಡುವ ಅಭಿಯಾನವನ್ನು ಪ್ರಾರಂಭ ಮಾಡುತ್ತೇನೆʼ ಎಂದು ಹೇಳಿದ್ದರು. ಅವರ ಮಾತಿಗೆ ಬದ್ದರಾಗಿ ನಿತಿನ್ ಶಿವಾಂಶ್ ಮತ್ತು ಸುಹಾನಾ ಸೈಯದ್ ಅವರಿಗೆ ಐದು ಲಕ್ಷ ರೂಪಾಯಿ ನೀಡಲಿ. ಆ ಮೂಲಕ ಧರ್ಮಾತೀತ ಭಾರತವನ್ನು ನಿರ್ಮಾಣ ಮಾಡಲು ಅವರು ಸಹಾಯ ಮಾಡಿದಂತೆ ಆಗುತ್ತದೆ” ಎಂದು ವ್ಯಂಗ್ಯವಾಡಿದರು.
“ಒಂದು ಕಡೆ ಲವ್ ಜಿಹಾದ್ ವಿರುದ್ಧ ಮಾತನಾಡೊದು, ಮತ್ತೊಂದು ಕಡೆ ಹಿಂದೂ ಯುವಕರು ಮುಸ್ಲಿಂ ಹುಡುಗಿಯರನ್ನು ಮದುವೆಯಾದರೆ ಐದು ಲಕ್ಷ ಹಣ ನೀಡುತ್ತೇನೆ ಎನ್ನುವುದು. ಇದು ಯುವ ಜನಾಂಗವನ್ನು ದಾರಿ ತಪ್ಪಸುವ ಕೆಲಸವಲ್ಲದೆ ಮತ್ತೇನೂ ಅಲ್ಲ. ಸಮುದಾಯಗಳ ನಡುವೆ ಅಂತರ ಸೃಷ್ಟಿಸುವ ಕೆಲಸವನ್ನು ಯತ್ನಾಳ್ ಮಾಡುತ್ತಿದ್ದಾರೆ. ಅವರು ಆಡಿದ ಮಾತಿಗೆ ತಪ್ಪದೇ ನಡೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಕೊಪ್ಪಳ | 17ರ ಬಾಲಕಿ ಮೇಲೆ ಗ್ರಾಪಂ ನೌಕರನಿಂದ ಅತ್ಯಾಚಾರ; ಪೋಕ್ಸೊ ದಾಖಲು
ಈ ವೇಳೆ ಯುವ ಕಾಂಗ್ರೆಸ್‌ಸ ಮಾಜಿ ತಾಲೂಕು ಅಧ್ಯಕ್ಷ ಗವಿಸಿದ್ದನಗೌಡ ಮಾಲಿಪಾಟೀಲ್, ಉಪಾಧ್ಯಕ್ಷ ಸಂತೋಷ ಕುರಿ ಹಾಗೂ ಇತರರು ಉಪಸ್ಥಿತರಿದ್ದರು.





