ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆಯ ವಿಸ್ತರಣೆಯನ್ನು ವಿರೋಧಿಸಿ ರೈತರು ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದ್ದು, ಕಾರ್ಖಾನೆಯಿಂದ ಹೊರಬರುವ ಹೊಗೆ ಮತ್ತು ಧೂಳಿನಿಂದಾಗಿ ತಮ್ಮ ಬೆಳೆಗಳು ಹಾಳಾಗುತ್ತಿವೆ. ಮನೆಯಲ್ಲಿ ಮಕ್ಕಳು, ವೃದ್ಧರು ಅನಾರೋಗ್ಯಕ್ಕೀಡಾಗುತ್ತಿದ್ದಾರೆಂದು ಆರೋಪಿಸಿದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಗವಿಮಠದ ಆವರಣದಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಪ್ರತಿಭಟನೆ ನಡೆಸಿದರು. ಬಳಿಕ
ಹಾಲಿವರ್ತಿ ಪ್ರದೇಶದ ರೈತರು, ತಮ್ಮ ಜಮೀನುಗಳಲ್ಲಿ ಬೆಳೆದ ಕಡಲೆ, ಮೆಕ್ಕೆಜೋಳ, ಜೋಳ ಸೇರಿದಂತೆ ಹಲವು ಬೆಳೆಗಳಿಗೆ ಕಾರ್ಖಾನೆಯ ಹೊಗೆಯಿಂದಾಗುವ ಹಾನಿಯನ್ನು ಪ್ರದರ್ಶಿಸಲು, ಹಾಳಾದ ಬೆಳೆಗಳನ್ನು ಎತ್ತಿನ ಬಂಡಿಗಳಲ್ಲಿ ಹೊತ್ತು ತಂದಿದ್ದರು. ಕಳೆದ ಒಂದು ವರ್ಷದಿಂದ ಈ ಸಮಸ್ಯೆ ಎದುರಿಸುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ತೊಟ್ಟಿಲು ಸಹಿತ ಆಗಮಿಸಿದ ಮಹಿಳೆಯರು, “ಕಾರ್ಖಾನೆಗಳ ಹೊಗೆಯಿಂದ ಆರೋಗ್ಯದಲ್ಲಿ ಏರುಪೇರಾಗುತ್ತಿರುವ ಕಾರಣ ಬಂಜೆತನ ಎದುರಿಸುವಂತಾಗಿದೆ. ಮಕ್ಕಳಾಗದೆ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇವೆ. ಕೆಲವು ಮಹಿಳೆಯರಿಗೆ ಗರ್ಭಪಾತವಾಗಿದೆ, ಮತ್ತೆ ಕೆಲವರಿಗೆ ಸಂತಾನವಿಲ್ಲ. ಮನೆಯಲ್ಲಿ ತೊಟ್ಟಿಲು ತೂಗುವ ಅದೃಷ್ಟವಿಲ್ಲದಂತಾಗಿದೆ” ಎಂದು ಖಾಲಿ ತೊಟ್ಟಿಲು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಕ್ಸಿಜನ್ ಮಾಸ್ಕ್ ಧರಿಸಿ ಹೋರಾಟದಲ್ಲಿ ಭಾಗಿಯಾಗಿರುವ ಹಿರೇಬಗನಾಳದ ರೈತ ಮಂಜುನಾಥ, ಕಾರ್ಖಾನೆಗಳಿಂದ ಬರುವ ಹೊಗೆಯಿಂದ ಉಸಿರಾಡಲು ಆಗುತ್ತಿಲ್ಲವೆಂದು ದೂರುವ ಮೂಲಕ ಪ್ರತಿಭಟನೆಯ ಗಮನ ಸೆಳೆದರು.
ಟ್ರ್ಯಾಕ್ಟರ್ಗಳಲ್ಲಿ ಆಗಮಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತರು, ಕೊಪ್ಪಳದ ಬಸವೇಶ್ವರ ವೃತ್ತದಲ್ಲಿ ಸರ್ಕಾರದ ಶವಯಾತ್ರೆ ನಡೆಸಿದರು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರೂ ಕೂಡ ಭಾಗಿಯಾಗಿದ್ದು, ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿವೆ.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಕಲ್ಲು ತೂರಾಟ ಪ್ರಕರಣ: ಪ್ರಮೋದ್ ಮುತಾಲಿಕ್ ಜಿಲ್ಲಾ ಪ್ರವೇಶ ನಿಷೇಧಿಸಿ ಆದೇಶಿಸಿದ ಎಸ್‌ಪಿ
ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗಿಯಾದ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಸಂಸದ ರಾಜಶೇಖರ ಹಿಟ್ನಾಳ ಮತ್ತು ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ರನ್ನು ತರಾಟೆಗೆ ತೆಗೆದುಕೊಂಡ ರೈತರು, “ಕಾರ್ಖಾನೆ ವಿಸ್ತರಣೆ ಮಾಡುವಾಗ ಸುಮ್ಮನಿದ್ದು, ಈಗ ಇಲ್ಲಿಗ್ಯಾಕೆ ಬಂದ್ರಿ” ಎಂದು ಜನಪ್ರತಿನಿಧಿಗಳನ್ನು ಪ್ರಶ್ನಿಸಿದ್ದಾರೆ.





