ಕೊಪ್ಪಳ ತಾಲೂಕಿನ ಹಂದ್ರಾಳ ಗ್ರಾಮದಲ್ಲಿ ಬೇರೆ ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಆಕೆಯ ಸ್ವಂತ ಸಹೋದರನೇ ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
23 ವರ್ಷದ ಮೀನಾಕ್ಷಿ ಎರಡು ವರ್ಷಗಳ ಹಿಂದೆ ಎಸ್‌ಟಿ ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದು, ಈಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರೂ ಮಂಜುನಾಥ್ ಎನ್ನುವ ಸಹೋದರ ಕೊಡಲಿಯಿಂದ ಕೊಚ್ಚಿ ಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಮೀನಾಕ್ಷಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ವ್ಯಾಪ್ತಿಯ ಚಿತ್ತಾಪೂರ ಮೂಲದ ಕುರುಬ ಸಮುದಾಯದ ಮೀನಾಕ್ಷಿ, ಕುಟುಂಬದ ವಿರೋಧದ ನಡುವೆಯೂ ಎರಡು ವರ್ಷಗಳ ಹಿಂದೆ ಹಂದ್ರಾಳ ಗ್ರಾಮದ ನಾಯಕ ಸಮುದಾಯದ ಉದಯನನ್ನು ಪ್ರೀತಿಸಿ ಮದುವೆಯಾಗಿದ್ದಳು. ಇದರಿಂದ ಆಕೆಯ ಸಹೋದರ ಮಂಜುನಾಥ್ ಆಕ್ರೋಶಗೊಂಡು ಸಿಟ್ಟಿನಲ್ಲೇ ಇದ್ದನು.
ಮದುವೆ ಹಿನ್ನೆಲೆ ಮೀನಾಕ್ಷಿ ಪತಿಯೊಂದಿಗೆ ಹಂದ್ರಾಳ ಗ್ರಾಮಕ್ಕೆ ಬಂದಿದ್ದರು. ಇದೇ ವೇಳೆ ಮಂಜುನಾಥ್ ಆಕೆಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದರೆಂದು ತಿಳಿದುಬಂದಿದೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮೀನಾಕ್ಷಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಬಿ ಎಂ ರೋಹಿಣಿ ಎಂಬ ಮಾನವೀಯತೆಯ ಪ್ರತಿರೂಪ
ಅಳವಂಡಿ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸಹೋದರಿ ಮೀನಾಕ್ಷಿಯನ್ನು ಕೊಲೆ ಮಾಡಲು ಯತ್ನಿಸಿದ್ದ ಸಹೋದರ ಮಂಜುನಾಥನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.





