ಸಂಬಂಧಿಕರ ವಿಷಯವಾಗಿ ಪೋಲೀಸ್ ಠಾಣೆಗೆ ದೂರು ನೀಡಲು ಬಂದ ದಲಿತ ಯುವಕನ ಮೇಲೆಯೇ ಕೊಪ್ಪಳ ಜಿಲ್ಲೆಯ ಕುಕನೂರು ಠಾಣೆ ಪೊಲೀಸ್ ಉಪನಿರೀಕ್ಷಕ (ಪಿಎಸ್ಐ) ಗುರುರಾಜ್ ಅವರು ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿ ಪೊಲೀಸ್ ಠಾಣೆಯ ಎದುರು ದಲಿತ ಸಮುದಾಯದವರು ದಿಡೀರ್ ಪ್ರತಿಭಟನೆಗಿಳಿದ ಘಟನೆ ನಡೆದಿದೆ.
ಕೊಪ್ಪಳ ತಾಲೂಕಿನ ಯಲಿಮಗೆರೆ ಗ್ರಾಮದ ಗಾಳೇಪ್ಪ ಹಿರೇಮನಿ ಎಂಬುವವರು ಕುಕನೂರು ಠಾಣೆಯಲ್ಲಿ ತಮ್ಮ ಸಂಬಂಧಿಕರಿಂದ ತಮಗಾದ ಅನ್ಯಾಯ ಹಾಗೂ ಸಮಸ್ಯೆಯ ಕುರಿತು ಹೇಳಿ ನ್ಯಾಯ ಕೊಡಿಸಿ ಎಂದು ಕೇಳಿದ್ದು, ಇದಕ್ಕೆ ಪ್ರತಿಯಾಗಿ ಕುಕುನೂರು ಸಬ್‌ಇನ್ಸ್‌ಪೆಕ್ಟರ್ ಗುರುರಾಜ್‌ರವರು ಕುತ್ತಿಗೆ ಪಟ್ಟಿಹಿಡಿದು ‘ಜಾತಿ ನಿಂದನೆ’ ಮಾಡಿ ಅವಾಚ್ಯ ಶಬ್ಧಗಳಿಂದ ಬೈದು ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

‘ನೀವು ದಲಿತರು ಐದುನೂರು ರೂಪಾಯಿಗೆ ಚಿಲ್ಲರೆ ಕೆಲಸ ಮಾಡುತ್ತಿರಿ, ನಿಮ್ಮಿಂದ ನಾನು ಕೆಲಸ ಕಲಿಯುವ ಜರೂರು ಇಲ್ಲ ಎಂದು ಅವಾಚ್ಯ ಶಬ್ಧದಿಂದ ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿರುವುದಕ್ಕೆ ಠಾಣೆಯ ಸಿಸಿಟಿವಿಯಲ್ಲಿ ಸಾಕ್ಷಿ ಇದೆ ಅದನ್ನು ನೋಡಬಹುದು’ ಎಂದು ಹಲ್ಲೆಗೊಳಗಾದ ಗಾಳೆಪ್ಪ ತಿಳಿಸಿದ್ದಾರೆ.
ಸಂತ್ರಸ್ತ ಯುವಕ ಹಾಗೂ ದಲಿತ ಸಮುದಾಯದವರು ಪಿಎಸ್ಐ ಗುರುರಾಜ್ ರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಕುಕನೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಾಮಾಜಿಕ, ಶೈಕ್ಷಣಿಕ ಮರು ಸಮೀಕ್ಷೆ: ಗಣತಿದಾರರ ವಿರೋಧ
ಸ್ಥಳಕ್ಕೆ ಸಿಪಿಐ ಮೌನೇಶ್ ಬಡಿಗೇರ ಅವರು ಭೇಟಿ ಕೊಟ್ಟು ವಿಷಾದ ವ್ಯಕ್ತಪಡಿಸಿ ಪ್ರತಿಭಟನಾಕಾರರನ್ನು ಒಲೈಸಲು ಪ್ರಯತ್ನಿಸಿದರೂ, ಪಟ್ಟು ಬಿಡದೇ ಪಿಎಸ್‌ಐ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಹಾಗೂ ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದರು.





