ಕೊಪ್ಪಳದ ಹಮಾಲರ ಕಾಲನಿಯಲ್ಲಿರುವ ಎಸ್‌ಸಿ-3 ವಸತಿ ನಿಲಯದಲ್ಲಿ ಸಮಸ್ಯೆಗಳು ತಾಂಡವಾಡುತ್ತಿದ್ದು ವಿದ್ಯಾರ್ಥಿಗಳಿಗೆ ಕೊಳೆತ ತರಕಾರಿಯಲ್ಲಿ ಅಡುಗೆ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಕೊಪ್ಪಳ ಜಿಲ್ಲಾಡಳಿತ ಭವನದ ಎದುರು ಸೋಮವಾರ ತಡರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದರು.
ವಸತಿ ನಿಲಯದಲ್ಲಿ ಶೌಚಾಲಯಗಳು ಸ್ವಚ್ಚವಾಗಿಲ್ಲ, ಊಟದಲ್ಲಿ ಸತ್ವವಿಲ್ಲ, ವಿದ್ಯಾರ್ಥಿಗಳಿಗೆ ಸರಿಯಾಗಿ ಬಾಳೆಹಣ್ಣು ಕೊಟ್ಟಿಲ್ಲ, ಸರಿಯಾಗಿ ನಿರ್ವಹಣೆ ಮಾಡದ ವಾರ್ಡನ್ ಬಸವರಾಜ ಕಟ್ಟಿ ಅವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕು ಎಂದು ದೂರಿದರು. ವಾರ್ಡನ್ ಬದಲಾವಣೆ ಮಾಡುವ ಕುರಿತು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ ವಿದ್ಯಾರ್ಥಿಗಳೊಂದಿಗೆ ಮಾತು ಕತೆ ನಡೆಸಿದರು.
ವಾರ್ಡನ್ ಬದಲಾವಣೆ ಮಾಡಲು ಒಂದು ವಾರ ಸಮಯ ಕೇಳಿದ ಅಧಿಕಾರಿಗಳ ಮನವಿಗೆ ಕಿವಿಗೊಡದೆ ವಿದ್ಯಾರ್ಥಿಗಳು ತಕ್ಷಣವೇ ವಾರ್ಡನ್ ಬದಲಾವಣೆ ಆಗಬೇಕು ಎಂದು ಪಟ್ಟು ಹಿಡಿದರು. ವಿದ್ಯಾರ್ಥಿಗಳ ಮನವಿಗೆ ಒಪ್ಪದ ಕಾರಣ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ವಾರ್ಡನ್ ಬದಲಾವಣೆ ಮಾಡುವ ತನಕ ಸ್ಥಳಬಿಟ್ಟು ಹೋಗುವುದಿಲ್ಲ. ಊಟದಲ್ಲಿ ಕೂದಲು, ಜಿರಳೆ ಬೀಳುವುದು ಸಾಮಾನ್ಯವಾಗಿದೆ. ಸರಿಯಾಗಿ ಮೊಟ್ಟೆ ನೀಡುವುದಿಲ್ಲ ಎಂದು ದೂರಿದರು. ಕೆಲ ವಿದ್ಯಾರ್ಥಿಗಳ ತಟ್ಟೆ ಸಮೇತ ಬಂದು ಪ್ರತಿಭಟಿಸಿದರು.
ಇದನ್ನೂ ಓದಿ: ಕೊಪ್ಪಳ | ಕೌಟುಂಬಿಕ ಕಲಹ ಬಗೆಹರಿಸಲು ಹೋದ ಯುವಕನ ಮೇಲೆ ಗುಂಪು ಹಲ್ಲೆ; ನಾಲ್ವರ ಬಂಧನ
ಸ್ಥಳಕ್ಕೆ ಬಂದ ಪೊಲೀಸರು ವಿದ್ಯಾರ್ಥಿಗಳನ್ನು ಮನವೊಲಿಸಿ ಸಮಾಧಾನಪಡಿಸಿದರು.





