ಅನ್ಯ ಜಾತಿಯ ಯುವಕನ್ನು ಮದುವೆ ಆಗಿದ್ದಕ್ಕೆ ಸ್ವಂತ ನಾಲ್ಕು ತಿಂಗಳ ಗರ್ಭಿಣಿ ತಂಗಿಯನ್ನೇ ವ್ಯಕ್ತಿಯೋರ್ವ ಕೊಡಲಿಯಿಂದ ಕೊಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಕೊಪ್ಪಳ ತಾಲೂಕಿನ ಹಂದ್ರಾಳ್ ಗ್ರಾಮದಲ್ಲಿ ಬುಧವಾರ ನಡೆದಿದೆ.
ಚಿತ್ತಾಪುರದ ಮೀನಾಕ್ಷಿ ಗಂಭೀರವಾಗಿ ಗಾಯಗೊಂಡ ಮಹಿಳೆ. ಮಂಜುನಾಥ ಎಂಬಾತ ಹಲ್ಲೆ ನಡೆಸಿದ ಆರೋಪಿ ಎಂದು ತಿಳಿದು ಬಂದಿದೆ.
ಒಂದು ವರ್ಷದ ಹಿಂದೆ ಕುರುಬ ಜನಾಂಗಕ್ಕೆ ಸೇರಿದ ಯುವತಿ ಮೀನಾಕ್ಷಿ, ನಾಯಕ ಸಮುದಾಯಕ್ಕೆ ಸೇರಿದ ಯುವಕನ ಜೊತೆ ಮದುವೆ ಆಗಿದ್ದರು. ಒಂದು ವರ್ಷದಿಂದ ಬೇರೆ ಊರಲ್ಲಿ ವಾಸವಿದ್ದ ಇವರು, ಸಂಬಂಧಿಯ ಮದುವೆ ಇದ್ದ ಕಾರಣ ಊರಿಗೆ ಬಂದಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಆರೋಪಿ ಮಂಜುನಾಥ ಮನೆಯಲ್ಲಿ ಇದ್ದ ಮೀನಾಕ್ಷಿಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ಗಾಬರಿಗೊಂಡ ಯುವತಿ ಮದುವೆ ವೇದಿಕೆಯತ್ತ ಓಡಿ ಬಂದಿದ್ದು, ಈ ವೇಳೆ ವೇದಿಕೆಯ ಮುಂದೆಯೇ ಕೊಡಲಿಯಿಂದ ತಲೆಗೆ, ಬೆನ್ನು ಮತ್ತು ಎಡಗೈಗೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಕೊಪ್ಪಳ | ವಿದೇಶಿ ಮಹಿಳೆ ಅತ್ಯಾಚಾರ, ಪ್ರವಾಸಿ ಕೊಲೆ ಪ್ರಕರಣ : 3 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ
ತೀವ್ರವಾಗಿ ಗಾಯಗೊಂಡ ಯುವತಿಯನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ. ಆಸ್ಪತ್ರೆಗೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ದಿ ಭೇಟಿ ನೀಡಿ ವಿಚಾರಿಸಿದ್ದಾರೆ.





