ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಳಗೇರಿ ಗ್ರಾಮದಲ್ಲಿ ಅಂತರ್ಜಾತಿ ವಿವಾಹದ ಹಿನ್ನೆಲೆ ಗಲಾಟೆ ಸಂಭವಿಸಿ ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಲಿಂಗಾಯತ ಸಮುದಾಯಕ್ಕೆ ಸೇರಿದ ಯುವಕ ಹಾಗೂ ಬಾರಕೇರ (ಗಂಗಾಮತ ) ಸಮುದಾಯಕ್ಕೆ ಸೇರಿದ ಯುವತಿ ಪರಸ್ಪರ ಪ್ರೀತಿಸಿ ಮೂರ್ನಾಲ್ಕು ದಿನಗಳ ಹಿಂದೆ ಮದುವೆಯಾಗಿದ್ದಾರೆ ಎಂದು ಹೇಳಲಾಗಿದೆ. ಪ್ರೀತಿಸಿದ ಯುವಕ ಮತ್ತು ಯುವತಿ ಇಬ್ಬರೂ ಬಳಗೇರಿ ಗ್ರಾಮದವರಾಗಿದ್ದು, ಇಬ್ಬರೂ ವಯಸ್ಸಿನಲ್ಲಿ ಮೇಜರ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಯುವತಿಯ ಸಂಬಂಧಿಕರು ಗದಗ್ ಜಿಲ್ಲೆಯ ರೋಣ ತಾಲೂಕಿನ ಶಾಂತಿಗಿರಿ-ಇಟಗಿ ಗ್ರಾಮದವರಾಗಿದ್ದು, ಮದುವೆಯ ವಿಷಯ ತಿಳಿದ ನಂತರ ಬಳಗೇರಿ ಗ್ರಾಮಕ್ಕೆ ಬಂದು ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ.


ಬಳಗೇರಿ ಗ್ರಾಮದ ಗ್ಯಾರೇಜ್ ಸಮೀಪ ನಡೆದ ಜಗಳದಲ್ಲಿ ಬಸಪ್ಪ ತಳವಾರ್ (69) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕುಕನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಕೊಪ್ಪಳ | ವಿದೇಶಿ ಮಹಿಳೆ ಅತ್ಯಾಚಾರ, ಪ್ರವಾಸಿ ಕೊಲೆ ಪ್ರಕರಣ : 3 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ
ಘಟನೆಯ ನಂತರ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಪ್ರಕರಣ ಸಂಬಂಧ ಕುಕನೂರು ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಸುವೋಮೋಟೊ ಕೇಸ್ ದಾಖಲಾಗಿದೆ ಎಂದು ಎಂದು ತಿಳಿದುಬಂದಿದೆ.





