ಮನುವಾದಿಗಳು ಸಂವಿಧಾನದ ಮೇಲೆ ನಂಬಿಕೆ ಇಟ್ಟುಕೊಂಡಿಲ್ಲದೆ, ಬಾಯಿಗೆ ಬಂದಂತೆ ಮಾತನಾಡಿ ಸಂವಿಧಾನಕ್ಕೆ ಅಗೌರವ ತೋರಿಸಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮನುವಾದಿಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಾ. ಗವಯ್ ಅವರ ಮೇಲೆ ಶೂ ಎಸೆದಿದ್ದಾರೆ. ಇದು ಕೇವಲ ವ್ಯಕ್ತಿಗೆ ಅಲ್ಲ, ಭಾರತದ ಸಂವಿಧಾನ, ನ್ಯಾಯಾಂಗ ಮೇಲಿನ ದಾಳಿ. ಇಂಥ ಕೃತ್ಯಗಳು ಸಂವಿಧಾನದ ಮೂಲ ತತ್ವಗಳನ್ನೇ ಬುಡಮೇಲು ಮಾಡಲು ಹೊರಟಿರುವ ಮನುವಾದಿಗಳ ನಿಜಸ್ವಭಾವವನ್ನು ತೋರಿಸುತ್ತದೆ. ಒಬ್ಬ ಹಿರಿಯ ವಕೀಲ ಹೀಗೆ ಮಾಡಿರುವುದು ಆಶ್ಚರ್ಯಕರ. ಮಾನ್ಯ ಸುಪ್ರೀಂ ಕೋರ್ಟ್ ಚೀಫ್ ಜಸ್ಟಿಸ್‌ಗಳ ಮೇಲೆ ಶೂ ಎಸೆದು, ಅದನ್ನು ಸಮರ್ಥಿಸಿಕೊಂಡಿರುವುದು ಅನಾಗರಿಕತೆಯ ಸೂಚನೆ. ಇದು ಕಾನೂನಿನ ಗೌರವಕ್ಕೆ ಧಕ್ಕೆ ತರುವ ಕಾರ್ಯವಾಗಿದೆ ಎಂದು ಹೇಳಿದ್ದಾರೆ.
ನ್ಯಾಯಮೂರ್ತಿ ಗವಯ್ ಅವರ ಮೇಲೆ ನಡೆದಿರುವ ಈ ದಾಳಿ ಜಾತಿ ದ್ವೇಷದಿಂದ ಪ್ರೇರಿತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಗವಯ್ ಅವರ ಕುತ್ತಿಗೆಗೆ ಮಡಿಕೆ ಹಾಕಿ, ಅವರಿಗೆ ಚಪ್ಪಲಿಯಲ್ಲಿ ಹೊಡೆಯುವ ಫೋಟೋಗಳನ್ನು ಹಂಚಿರುವುದನ್ನು ನಾನು ನೋಡಿದ್ದೇನೆ. ಇದು ಸಂಪೂರ್ಣವಾಗಿ ದಲಿತ ಸಮುದಾಯದ ವಿರುದ್ಧದ ಅವಮಾನಕಾರಿ ಕೃತ್ಯ, ಎಂದು ಹೇಳಿದ್ದಾರೆ.
ಒಂದು ಬ್ರಾಹ್ಮಣ ಹುಡುಗನ ಜನಿವಾರ ತೆಗೆದ ಘಟನೆಗೆ ಬೆಂಕಿ ಹಚ್ಚಿದ ಬಿಜೆಪಿ ನಾಯಕರು, ಇದೀಗ ಗವಯ್ ಅವರ ಮೇಲೆ ಶೂ ಎಸೆದ ವಿಷಯದಲ್ಲಿ ಮೌನವಾಗಿರುವುದು ಇತಿಹಾಸದಲ್ಲಿ ಮರೆಯಲಾಗದ ಲಜ್ಜಾಸ್ಪದ ಘಟನೆ. ನ್ಯಾಯಮೂರ್ತಿ ಮೇಲೆ ಶೂ ಎಸೆದ ವ್ಯಕ್ತಿಯನ್ನು ಕಾಪಾಡುವ ಧೋರಣೆ ಅಸಹ್ಯಕರವಾಗಿದೆ. ಭಾಸ್ಕರ್ ರಾವ್ ಅವರಂತಹ ಹಿರಿಯ ಅಧಿಕಾರಿ ನ್ಯಾಯಮೂರ್ತಿ ಮೇಲೆ ಶೂ ಎಸೆದಿರುವುದು ತಪ್ಪು, ಆದರೆ ಆ ವ್ಯಕ್ತಿಯ ಧೈರ್ಯ ಮೆಚ್ಚಬೇಕು’ ಎಂದು ಹೇಳುವುದು ಅತ್ಯಂತ ಲಜ್ಜಾಸ್ಪದ. ಇದು ಕಾನೂನು ಪಾಲಕರಿಂದ ಬಂದ ಲಜ್ಜೆ ಗೆಟ್ಟ ಹೇಳಿಕೆ ಆಗಿದೆ. ಇಂಥ ವ್ಯಕ್ತಿಗಳು ಸಮಾಜದಲ್ಲಿ ಹಿತಚಿಂತಕರಾಗಲು ಯೋಗ್ಯರಲ್ಲ ಎಂದು ಹೇಳಿದ್ದಾರೆ.





