ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿಯಲ್ಲಿ ನ್ಯಾಯಾಲಯದ ಆದೇಶವನ್ನೂ ಮೀರಿ ಅನಧಿಕೃತ ಕಟ್ಟಡದಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಘನ ತ್ಯಾಜ್ಯ ಘಟಕವನ್ನು ಉದ್ಘಾಟಿಸಲಾಗಿದೆ. ಇದರಿಂದ ಸುಮಾರು 1.80 ಕೋಟಿ ರು.ಗೂ ಮಿಕ್ಕಿ ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈ ಕಾನೂನುಬಾಹಿರ ಜನವಿರೋಧಿ ಘಟಕದ ವಿರುದ್ಧ ಹೋರಾಟ ನಡೆಸುತ್ತಿರುವ ಸ್ಥಳೀಯರಾದ ನಾಗೇಂದ್ರ ಪುತ್ರನ್ ಹಾಗೂ ಮಹೇಶ್ ಪೂಜಾರಿ ಪಾರಂಪಳ್ಳಿ ಅವರು, ಸ್ಥಳೀಯ ವಿರೋಧದ ನಡುವೆಯೇ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉದ್ಘಾಟಿಸಿದ್ದಾರೆ ಎಂದು ಆರೋಪಿಸಿದರು.
ಈ ಘಟಕ ಸ್ಥಾಪಿಸಿರುವ 104 – 24, 25 ಸರ್ವೆ ನಂಬರ್ ಭೂಪರಿವರ್ತನೆಯಾಗಿಲ್ಲ, ಇಖಾತಾವೂ ಆಗಿಲ್ಲ, ಆದರೂ ಸಾಲಿಗ್ರಾಮ ಪಪಂ ಈ ಭೂಮಿಯನ್ನು ಖರೀದಿಸಿದ್ದು ಭೂಕಂದಾಯ ಕಾಯ್ದೆ 1964ರಡಿ ಅಕ್ರಮವಾಗಿದೆ. ಈ ಘಟಕವು ನದಿ ಪಕ್ಕದಿಂದ 50 ಮೀಟರ್ ವ್ಯಾಪ್ತಿಯೊಳಗೆ ಇರುವುದರಿಂದ ಸಿಆರ್‌ಝಡ್ ನಿಮಯ ಉಲ್ಲಂಘನೆಯಾಗಿದೆ. ಆದ್ದರಿಂದ ಸಿಆರ್‌ಝಡ್‌ನಿಂದ ಅನುಮತಿ ಸಿಕ್ಕಿಲ್ಲ, ಆದ್ದರಿಂದ ಈ ಘಟಕ ನಿರ್ಮಾಣ ಕಾನೂನು ಪ್ರಕಾರ ಅಪರಾಧವಾಗಿದೆ. ಈ ಜಮೀನಿಗೆ ತೆರಳುವ ರಸ್ತೆ ಕೂಡ ಪಂಚಾಯತ್ ಅಥವಾ ಸರ್ಕಾರಿ ರಸ್ತೆಯಲ್ಲ ಎಂದವರು ಆರೋಪಿಸಿದರು.
2013ರಲ್ಲಿಯೇ ಅಂದಿನ ಜಿಲ್ಲಾಧಿಕಾರಿ ರೇಜು ಅವರು ಈ ಕಟ್ಟಡವನ್ನು ಅನಧಿಕೃತ ಎಂದು ಘೋಷಿಸಿದ್ದಾರೆ. ಈ 104 -24, 25 ಸರ್ವೆ ನಂಬರ್ ನಲ್ಲಿರುವ ಕಟ್ಟಡ ಕಾನೂನುಬಾಹಿರ ಎಂದು ಕುಂದಾಪುರ ಜೆಎಂಸಿ ನ್ಯಾಯಾಲಯ ತೀರ್ಪು ನೀಡಿ, ಮಾಲಕನಿಗೆ 15 ಸಾವಿರ ರು. ದಂಡ ವಿಧಿಸಿದೆ. ಈ ಘಟಕ ಸ್ಥಾಪನೆಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ಪರವಾನಿಗೆ ಪಡೆಯಲಾಗಿಲ್ಲ, ಈ ಸರ್ವೆ ನಂಬರಿನ ಭೂಮಿ ಖರೀದಿಯಲ್ಲಿ ಅವ್ಯವಹಾರ ಆಗಿರುವ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದವರು ದಾಖಲೆಗಳನ್ನು ಬಿಡುಗಡೆ ಮಾಡಿದರು.
ಅಧಿಕಾರಿಗಳು ಎಲ್ಲಾ ಗೊತ್ತಿದ್ದು ಜನಪ್ರತಿನಿಧಿಗಳನ್ನು ದಾರಿತಪ್ಪಿಸಿದ್ದಾರೆ. ಸ್ಥಳೀಯ ಜನಜೀವನದ ಮೇಲೆ ಮತ್ತು ನದಿಯ ನೀರಿನ ಮೇಲೆ ದುಷ್ಪರಿಣಾಮ ಬೀರಲಿರುವ ಈ ಘಟಕದ ವಿರುದ್ಧ ಹೋರಾಟ ಮುಂದುವರಿಯುತ್ತದೆ ಎಂದು ಹೋರಾಟಗಾರ ನಾಗೇಂದ್ರ ಪುತ್ರನ್ ಹೇಳಿದರು.
ಸ್ಥಳೀಯರಾದ ಅಶೋಕ್ ಪೂಜಾರಿ, ಗಣಪತಿ, ಗಣೇಶ ಸಾಲಿಗ್ರಾಮ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು





