ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ-2007 ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಜಿಲ್ಲೆಯ 55 ಕ್ಲಿನಿಕ್ ಮತ್ತು ವೈದ್ಯರಿಗೆ ಒಟ್ಟು 22.27 ಲಕ್ಷ ರೂ. ದಂಡ ವಿಧಿಸಲು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಆದೇಶಿಸಿದ್ದಾರೆ.
ಕೆಪಿಎಂಇ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ 42 ಜನರಿಗೆ ತಲಾ 50 ಸಾವಿರ, 5 ಜನರಿಗೆ ತಲಾ 20 ಸಾವಿರ, 5 ಜನರಿಗೆ ತಲಾ 5 ಸಾವಿರ, ಇಬ್ಬರಿಗೆ ತಲಾ 1ಸಾವಿರ ದಂಡ ವಿಧಿಸಿ ಕೂಡಲೇ ದಂಡ ವಿಧಿಸಲು ಮಂಗಳವಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಪಿಎಂಇ ಜಿಲ್ಲಾ ಮಟ್ಟದ ನೋಂದಣಿ ಮತ್ತು ಕುಂದುಕೊರತೆ ಪ್ರಾಧಿಕಾರ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇನ್ನುಳಿದಂತೆ 6 ಜನ ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ದಂಡ ಕಟ್ಟಲು ತಪ್ಪಿದಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕಳೆದ ಡಿಸೆಂಬರ್‌ದಿಂದ ಜೂನ್‌ವರೆಗೆ ಸಹಾಯಕ ಆಯುಕ್ತರ ನೇತೃತ್ವದಲ್ಲಿ ತಪಾಸಣಾ ತಂಡ ನಿಯಮಿತ ದಾಳಿ ನಡೆಸಿ ಒಟ್ಟು 61 ಕ್ಲಿನಿಕ್ ಮತ್ತು ವೈದ್ಯರ ಮೇಲೆ ಕೆಪಿಎಂಇ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಇಲಾಖಾ ಎಫ್ಐಆರ್. ದಾಖಲಿಸಿ ಡಿ.ಸಿ. ಅಧ್ಯಕ್ಷತೆಯ ಕುಂದುಕೊರತೆ ಪ್ರಾಧಿಕಾರದ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಅದರಂತೆ ಮಂಗಳವಾರ ಸಭೆಗೆ ಅಗಮಿಸಿದ ವೈದ್ಯರ ಅಹವಾಲು ಆಲಿಸಿ ಜಿಲ್ಲಾಧಿಕಾರಿಗಳು ದಂಡ ವಿಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಎಸ್ಪಿ ಚನ್ನಬಸವಣ್ಣ ಎಸ್.ಎಲ್. ವರ್ಗಾವಣೆ : ಪ್ರದೀಪ ಗುಂಟಿ ನೂತನ ಎಸ್ಪಿ
ಸಭೆಯಲ್ಲಿ ಡಿಎಚ್ಓ ಡಾ.ರತಿಕಾಂತ ಸ್ವಾಮಿ, ಆಳಂದ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ, ಜಿಲ್ಲಾ ಆಯೂಷ್ ಅಧಿಕಾರಿ ಡಾ.ಗಿರಿಜಾ ನಿಗ್ಗುಡಗಿ ಸೇರಿದಂತೆ ಇನ್ನಿರರಿದ್ದರು.





