ಇಂದು ಬೆಳಗ್ಗೆ ಬೆಂಗಳೂರಿನ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಿವೇಣಿನಗರದಲ್ಲಿ ನಡೆದ ಭಾರೀ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಸ್ಥಳಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಬೈರತಿ ಬಸವರಾಜ್ ಭೇಟಿ ನೀಡಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ವೈಯಕ್ತಿಕವಾಗಿ 1 ಲಕ್ಷ ಪರಿಹಾರ ಹಾಗೂ ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಶಾಸಕ ಬೈರತಿ ಬಸವರಾಜ್ ಘೋಷಿಸಿದ್ದಾರೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, “ತ್ರಿವೇಣಿನಗರದಲ್ಲಿ ಸಂಭವಿಸಿದ ಸ್ಫೋಟದಿಂದ ಅಕ್ಕಯ್ಯಮ್ಮ ಎನ್ನುವರರು ಸಾವನ್ನಪ್ಪಿರುವುದು ದುಃಖದ ಸಂಗತಿ. ಗಟ್ಟಿ ಆರ್‌ಸಿಸಿ ಮನೆಯಲ್ಲಿ ಕೇವಲ ಸಿಲಿಂಡರ್ ಲೀಕ್‌ನಿಂದ ಇಷ್ಟು ಭಾರೀ ಹಾನಿಯಾಗಲು ಸಾಧ್ಯವೇ ಎನ್ನುವುದು ಅನುಮಾನಾಸ್ಪದವಾಗಿದೆ. ಇದು ಗ್ಯಾಸ್ ಸ್ಫೋಟವೇ ಅಥವಾ ಬೇರೆ ಕಾರಣವೋ ಎಂಬುದನ್ನು ಎಫ್‌ಎಸ್ಎಲ್ ವರದಿ ಸ್ಪಷ್ಟಪಡಿಸಬೇಕು. ಸತ್ಯ ಹೊರಬರಬೇಕು, ಮೃತರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಶಾಸಕ ಬೈರತಿ ಬಸವರಾಜ್, “ಈ ಘಟನೆ ನಮ್ಮ ಕ್ಷೇತ್ರದಲ್ಲಿ ಸಂಭವಿಸಿದ್ದು ನನಗೆ ತುಂಬಾ ದಿಗ್ಭ್ರಾಂತಿ ಉಂಟು ಮಾಡಿದೆ. ಇದು ಗ್ಯಾಸ್ ಸ್ಫೋಟದಿಂದ ಆಗಿದ್ಯೋ, ಅಥವಾ ಬೇರೆ ಯಾವುದೋ ಸ್ಫೋಟಕದಿಂದ ಆಗಿದ್ಯೋ ಎಂಬುದನ್ನು ತಿಳಿಯಲು ಸಮಗ್ರ ತನಿಖೆ ಅಗತ್ಯ. ಸಿಲಿಂಡರ್ ಬ್ಲಾಸ್ಟ್‌ನಿಂದ ಇಷ್ಟು ದೊಡ್ಡ ಹಾನಿ ಸಂಭವಿಸಿರುವುದು ಅನುಮಾನಾಸ್ಪದವಾಗಿದ್ದು, ಸತ್ಯ ಹೊರಬರಬೇಕು. ಮೃತಳ ಕುಟುಂಬಕ್ಕೆ ವೈಯಕ್ತಿಕವಾಗಿ ₹1 ಲಕ್ಷ ಪರಿಹಾರ ನೀಡುತ್ತೇನೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನೂ ಭರಿಸುತ್ತೇನೆ” ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರು | ಕೆಆರ್ ಪುರಂನಲ್ಲಿ ಸಿಲಿಂಡರ್ ಸ್ಫೋಟ: ಮನೆ ಧ್ವಂಸ, ಓರ್ವ ಮಹಿಳೆ ಸಾವು
ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋಟ್ ಘಟನೆ ಕುರಿತು ಪ್ರತಿಕ್ರಿಯಿಸಿ, “ಬೆಳಗ್ಗೆ ಸುಮಾರು 7.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಅಕ್ಕಯ್ಯಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಅವರು ಮಗ ಮತ್ತು ಮೊಮ್ಮಕ್ಕಳ ಜೊತೆ ವಾಸವಿದ್ದರು. ಬೆಳಗ್ಗೆ ಗ್ಯಾಸ್ ಲೀಕ್‌ನ ವಾಸನೆ ಬರುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ಸ್ಟವ್ ಆನ್ ಮಾಡಿದ ತಕ್ಷಣ ಬ್ಲಾಸ್ಟ್ ಆಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಮನೆ ಸಂಪೂರ್ಣ ಧ್ವಂಸವಾಗಿದೆ ಹಾಗೂ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ಒಬ್ಬರ ಸ್ಥಿತಿ ಗಂಭೀರವಾಗಿದೆ. ಸೋಕೋ, ಎಫ್‌ಎಸ್ಎಲ್ ಮತ್ತು ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆಸಲಾಗಿದ್ದು, ತನಿಖೆ ಮುಂದುವರಿಸುತ್ತಿದ್ದೇವೆ” ಎಂದರು.





