ಹಿಂದುತ್ವ ಕೇವಲ ಮತ ಬ್ಯಾಂಕ್ ಆಗಿದೆ. ಬಂಧುತ್ವಕ್ಕೆ ಬೆಂಕಿ ಹಚ್ಚುವ ಅಂತಹ ಹಿಂದುತ್ವ ಬೇಡ ಎಂದು ಮೈಸೂರು ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಬಸವ-ಭೀಮಸಂಗಮ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
“ಹಿಂದುಗಳು ಬಸವಣ್ಣನನ್ನು ವಿಶ್ವಗುರುವಾಗಲು ಬಿಡುತ್ತಿಲ್ಲ. ಬಸವ- ಅಂಬೇಡ್ಕರರ ಜ್ಞಾನದ ಬೀಜವನ್ನು ಮನೆ ಮನದಲ್ಲಿ ಬಿತ್ತಿದರೆ ಹಿಂದುತ್ವದ ಬೀಜ ನಾಶವಾಗುವುದು ಖಚಿತ” ಎಂದರು.
ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪ ಮಾತನಾಡಿ, “ಧರ್ಮಕ್ಕೆ ಮಾನವೀಯತೆ ಅಗತ್ಯ. ಜನ ಕಾಳಜಿ, ಸಮಾನತೆಯಂತ ತತ್ವಗಳ ನೆಲೆಗಟ್ಟಿನ ಮೇಲೆ ಬಸವಣ್ಣನ ವಿಚಾರಗಳಿದ್ದು, ಅದರ ಅಳವಡಿಕೆ ಭಾರತ ಸಂವಿಧಾನ. ಬಸವ-ಭೀಮರ ವಿಚಾರಧಾರೆಯ ಬಂಧುತ್ವ ಅನುಕರಣೆ ಇರಲಿ” ಎಂದು ತಿಳಿಸಿದರು.
ಸತ್ಯ ಶೋಧಕ ಸಂಘದ ರಾಜ್ಯ ಘಟಕದ ಅಧ್ಯಕ್ಷ ಪರಶುರಾಮ ಮಹಾರಾಜ ಮಾತನಾಡಿ, “ವೈದಿಕರು ವೇದಗಳ ಮೂಲಕ ಸಮಾಜ ಒಡೆಯುವ ಕಾರ್ಯ ಮಾಡಿದರು. ಸಮಾನತೆಯ ಮೂಲಕ ಸಮಾಜ ಕಟ್ಟುವ ಕಾರ್ಯವನ್ನು ಬಸವಣ್ಣನವರು ಮಾಡಿದರು. ಬಲಪಂಥೀಯ ಸಿದ್ದಾಂತ ರಾಜಕಾರಣದಿಂದ ಇಂದು ಬಸವ -ಭೀಮರ ವಿಚಾರಧಾರೆಗಳು ಭಾವಚಿತ್ರಕ್ಕೆ ಸೀಮಿತಗೊಂಡಿದ್ದು, ಚಿಂತನೆಯಲ್ಲಿ ಬರುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಾಗಲಕೋಟೆ | ಕಲಾ ಪ್ರತಿಭೋತ್ಸವಕ್ಕೆ ಅರ್ಜಿ ಆಹ್ವಾನ
ತಂಗಡಗಿ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮುಖಂಡರಾದ ಶರಣಪ್ಪ ಆಗಮದಿಹಾಳ, ಎಂ ಗೋಪಿನಾಥಮ್, ಮಹಾಂತೇಶ್ ಆವರಿ, ಎಸ್ ಎಮ್ ಪುರಾಣಿಕ, ಗಂಗಣ್ಣ ಬಾಗೇವಾಡಿ, ಶಿವಾನಂದ ಕಂಠಿ, ವಿಜಯ ಮಹಾಂತೇಶ ಗದ್ದನಕೇರಿ, ನಾಗರಾಜ ನಾಡಗೌಡ, ಮುಂತಾದವರು ಇದ್ದರು.





