ಕುಮಟಾ ತಾಲ್ಲೂಕಿನ ನಿವಾಸಿ ಸಂತೋಷ್ ಪ್ರಭಾಕರ ಶೇಟ್ ಎಂಬುವವರಿಗೆ ಮುಂಬೈ ನಿವಾಸಿ ಅಮಯ್ ಚಂದ್ರಕಾಂತ ಆಮ್ರೆ ಎನ್ನುವ ವ್ಯಕ್ತಿ ಕೊಂಕಣ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ 6 ಲಕ್ಷ ರೂಪಾಯಿಗೂ ಹೆಚ್ಚಿನ ಹಣವನ್ನು ತೆಗೆದುಕೊಂಡು ಮೊಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ವಿವರ: ಆರೋಪಿತ ವ್ಯಕ್ತಿ ತಾನು ಕೊಂಕಣ ರೈಲ್ವೆಯಲ್ಲಿ ಟ್ರ್ಯಾಕ್ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದೇನೆ, ಜೊತೆಗೆ ರೈಲ್ವೆ ಯೂನಿಯನ್ ಸದಸ್ಯನಾಗಿದ್ದೇನೆ ಎಂದು ಸುಳ್ಳು ಹೇಳಿ ನಂಬಿಕೆ ಮೂಡಿಸಿ ಮೋಸದ ಬಲೆಗೆ ಸಿಕ್ಕಿ ಹಾಕಿಸಿದ್ದಾನೆ ಎಂದು ಸಂತೋಷ ಅವರು ದೂರಿನಲ್ಲಿ ದಾಖಲಿಸಿದ್ದಾರೆ. ಆರೋಪಿಯ ಮಾತುಗಳನ್ನು ನಂಬಿದ ಸಂತೋಷ್, ಹಂತ ಹಂತವಾಗಿ ಒಟ್ಟು 6,46,602 ರೂಪಾಯಿಗಳನ್ನು ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಹಣ ಪಡೆದ ಬಳಿಕ ಆರೋಪಿಯು ಕೊಂಕಣ ರೈಲ್ವೆ ಲೆಟರ್ ಹೆಡ್ ಅಡಿಯಲ್ಲಿ ನಕಲಿ ಕಾಲ್ ಲೆಟರ್, ಪರೀಕ್ಷೆ ಮತ್ತು ವೆರಿಫಿಕೇಶನ್ ಪತ್ರಗಳನ್ನು ಸೃಷ್ಟಿಸಿ ಸಂತೋಷ್ ಅವರಿಗೆ ನೀಡಿ ನಂಬಿಸಿದ್ದನು.
ಈ ಸುದ್ದಿ ಓದಿದ್ದೀರಾ? ಕಾರವಾರ: 24 ಗಂಟೆಯೊಳಗೆ ಕಳ್ಳತನ ಪ್ರಕರಣ ಭೇದಿಸಿದ ಶಹರ ಠಾಣೆ ಪೊಲೀಸರು
ಆದರೆ, ಅಂತಿಮವಾಗಿ ಯಾವುದೇ ಉದ್ಯೋಗ ಕೊಡಿಸದೇ, ಪಡೆದ ಹಣವನ್ನೂ ವಾಪಸ್ ನೀಡದೇ ಆರೋಪಿ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ತಾನು ಮೋಸ ಹೋಗಿರುವುದು ಅರಿವಿಗೆ ಬರುತ್ತಿದ್ದಂತೆಯೇ ಸಂತೋಷ್ ಅವರು ಕುಮಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿತನ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.





