ಕುಮಟಾ: ಕೊಂಕಣ ರೈಲ್ವೆ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಈಗಾಗಲೇ 7 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿವೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಕುಮಟಾ ರೈಲ್ವೆ ನಿಲ್ದಾಣದಲ್ಲಿ ಸುಮಾರು 2.40 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಪ್ಲಾಟ್ಫಾರ್ಮ್ ಕಾಮಗಾರಿಯನ್ನು ಶಾಸಕ ದಿನಕರ ಶೆಟ್ಟಿ ಅವರೊಂದಿಗೆ ವೀಕ್ಷಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಕೊಂಕಣ ರೈಲ್ವೆ ಬಳಕೆದಾರರ ಸಮಿತಿಯ ಸಭೆಯಲ್ಲಿ ನಡೆದ ಸುದೀರ್ಘ ಚರ್ಚೆ ಹಾಗೂ ರೈಲ್ವೆ ಸಚಿವರ ಗಮನ ಸೆಳೆದ ಪರಿಣಾಮವಾಗಿ ಈ ಅನುದಾನ ಬಿಡುಗಡೆಯಾಗಿದೆ ಎಂದು ಸಂಸದರು ವಿವರಿಸಿದರು. ಕುಮಟಾದಲ್ಲಿ ನಿರ್ಮಾಣವಾಗುತ್ತಿರುವ ನೂತನ ಪ್ಲಾಟ್ಫಾರ್ಮ್ 620 ಮೀಟರ್ ಉದ್ದ, 6.5 ಮೀಟರ್ ಅಗಲ ಹಾಗೂ 85 ಸೆಂಟಿಮೀಟರ್ ಎತ್ತರವನ್ನು ಹೊಂದಿರಲಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ.

ಇದೇ ವೇಳೆ ರೈಲ್ವೆ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕ ವಾಹನಗಳ ನಿಲುಗಡೆಗಾಗಿ ವ್ಯವಸ್ಥಿತ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಧೋರಣೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಕಾಗೇರಿ ಅವರು, ನೆರೆರಾಜ್ಯಗಳಾದ ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳು ಕೊಂಕಣ ರೈಲ್ವೆ ಅಭಿವೃದ್ಧಿಗೆ ನೀಡುತ್ತಿರುವ ಸಹಕಾರಕ್ಕೆ ಹೋಲಿಸಿದರೆ ಕರ್ನಾಟಕ ಸರ್ಕಾರದ ಕೊಡುಗೆ ಅತ್ಯಂತ ಕಡಿಮೆ ಎಂದು ಟೀಕಿಸಿದರು.
ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬಂದರೂ, ಅವುಗಳ ಡಾಂಬರೀಕರಣಕ್ಕೂ ಸರ್ಕಾರ ಮುಂದಾಗುತ್ತಿಲ್ಲ ಎಂದು ಅವರು ದೂರಿದರು. ಜಿಲ್ಲೆಯ ಇತರ ನಿಲ್ದಾಣಗಳ ಅಭಿವೃದ್ಧಿಯ ಕುರಿತು ಮಾಹಿತಿ ನೀಡಿದ ಸಂಸದರು, ಗೋಕರ್ಣ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ ಹಾಗೂ ಮೇಲ್ಸೇತುವೆ (Over Foot Bridge), ಭಟ್ಕಳದಲ್ಲಿ ಹೆಚ್ಚುವರಿ ಪ್ಲಾಟ್ಫಾರ್ಮ್ ಹಾಗೂ ಮುರ್ಡೇಶ್ವರ ನಿಲ್ದಾಣದಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ಕಾಮಗಾರಿಗಳು ನಡೆಯಲಿವೆ ಎಂದರು.
ಈ ಸುದ್ದಿ ಓದಿದ್ದೀರಾ ? ಮುಂಡಗೋಡ-ಹಳಿಯಾಳದ ಮದ್ಯ-ಮಟ್ಕಾ ಅಡ್ಡೆಗಳ ಮೇಲೆ ಪೊಲೀಸ್ ದಾಳಿ; ಪಾಳಾ ಭಾಗದ ಮಟ್ಕಾ ದಂಧೆಗೆ ಬೀಳುತ್ತಾ ಬ್ರೇಕ್?
ಕಾರವಾರದಲ್ಲಿ ಈಗಾಗಲೇ ಎಸಿ ವಿಶ್ರಾಂತಿ ಗೃಹವನ್ನು ಲೋಕಾರ್ಪಣೆ ಮಾಡಲಾಗಿದ್ದು, ಮುಂದಿನ ಒಂದೆರಡು ವರ್ಷಗಳಲ್ಲಿ ಜಿಲ್ಲೆಯ ಕೊಂಕಣ ರೈಲ್ವೆ ನಿಲ್ದಾಣಗಳ ಚಿತ್ರಣವೇ ಸಂಪೂರ್ಣವಾಗಿ ಬದಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪರಿಶೀಲನೆಯ ಸಂದರ್ಭದಲ್ಲಿ ಕೊಂಕಣ ರೈಲ್ವೆ ಪ್ರಾದೇಶಿಕ ವ್ಯವಸ್ಥಾಪಕಿ ಆಶಾ ಶೆಟ್ಟಿ ಹಾಗೂ ಇಂಜಿನಿಯರ್ ವಿಜಯಕುಮಾರ್ ಅವರು ಕಾಮಗಾರಿಯ ತಾಂತ್ರಿಕ ವಿವರಗಳನ್ನು ಸಂಸದರಿಗೆ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ದಿನಕರ ಶೆಟ್ಟಿ, ಬಿಜೆಪಿ ಪ್ರಮುಖರು ಹಾಗೂ ರೈಲ್ವೆ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.





