ಕುಮಟಾ: ಗ್ರಾಮ ಪಂಚಾಯತ್‌ಗಳು ಕೇವಲ ಸರ್ಕಾರಿ ಕಚೇರಿಗಳಾಗದೆ, ಸ್ಥಳೀಯ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಒದಗಿಸುವ ಶಕ್ತಿ ಕೇಂದ್ರಗಳಾಗಬೇಕು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಾಂಕಾಳ ಎಸ್. ವೈದ್ಯ ಅವರು ತಿಳಿಸಿದರು.
ಶುಕ್ರವಾರ ಹಿರೇಗುತ್ತಿ ಗ್ರಾಮ ಪಂಚಾಯತ್‌ನ ನೂತನ ಸುಸಜ್ಜಿತ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿ ಅವರು. ಗ್ರಾಮೀಣ ಭಾಗದ ಜನರ ಸಮಸ್ಯೆಗಳು ಆಯಾ ಗ್ರಾಮಗಳಲ್ಲಿಯೇ ಇತ್ಯರ್ಥವಾಗಬೇಕು
ಎನ್ನುವ ಉದಾತ್ತ ಉದ್ದೇಶದಿಂದ ಸರ್ಕಾರವು ಇಂದು ಪಂಚಾಯತ್ ಮಟ್ಟದಲ್ಲಿಯೇ ಹಲವಾರು ನಾಗರಿಕ ಸೇವೆಗಳನ್ನು ಒದಗಿಸುತ್ತಿದೆ. ತಮ್ಮ ಅಹವಾಲುಗಳನ್ನು ಹೊತ್ತು ಪಂಚಾಯತ್‌ಗೆ ಬರುವ ಸಾರ್ವಜನಿಕರೊಂದಿಗೆ ಅಧಿಕಾರಿಗಳು ತಾಳ್ಮೆಯಿಂದ ವರ್ತಿಸಬೇಕು.
ಅವರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವ ಮೂಲಕ ಜನಸಾಮಾನ್ಯರ ವಿಶ್ವಾಸ ಗಳಿಸಬೇಕು ಎಂದು ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ದಿನಕರ ಶೆಟ್ಟಿ ಅವರು ಮಾತನಾಡಿ, ಹಿರೇಗುತ್ತಿ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಸೇರಿದಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಸತೀಶ್ ಸೈಲ್‌ಗೆ ಮತ್ತೆ ವೈದ್ಯಕೀಯ ಜಾಮೀನು ಮಂಜೂರು: ಲಿವರ್ ಕಸಿ ಶಸ್ತ್ರಚಿಕಿತ್ಸೆಗೆ ಹೈಕೋರ್ಟ್ ಅನುಮತಿ
ಈ ಭಾಗದ ಕಾಲೇಜು ಕಟ್ಟಡಕ್ಕೂ ಹೆಚ್ಚಿನ ಅನುದಾನ ಒದಗಿಸಲಾಗಿದ್ದು, ಪಂಚಾಯತ್ ಕಟ್ಟಡದ ಮುಂದಿನ ಅಗತ್ಯಗಳಿಗೆ ತಕ್ಕಂತೆ ಹೆಚ್ಚುವರಿ ಅನುದಾನ ನೀಡುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾಂತಾ ನಾರಾಯಣ ನಾಯ್ಕ, ಉಪಾಧ್ಯಕ್ಷೆ ವೆಂಕಮ್ಮ ಹರಿಕಂತ್ರ, ತಹಸೀಲ್ದಾರ್ ಕೃಷ್ಣ ಕಾಮಕರ್ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಜೇಂದ್ರ ಭಟ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೇಖಾ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.





