ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ದ್ವೇಷಕ್ಕಾಗಿ ವ್ಯಕ್ತಿಯೊಬ್ಬನನ್ನು ಮನಬಂದಂತೆ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ತಾಲೂಕಿನ ಮೆಣಸಿನಕೇರಿ ಕೂಜಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆಯ ವಿವರ: ಮೆಣಸಿನಕೇರಿ ಕೂಜಳ್ಳಿ ನಿವಾಸಿ ಮಾರುತಿ ಹೆಗಡೆ (58) ಕೊಲೆಯಾದ ದುರ್ದೈವಿ. ಇದೇ ಗ್ರಾಮದ ನಾಗಪ್ಪ ಗೌಡ (40) ಎಂಬಾತ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ.
ಗ್ರಾಮದ ಅನಂತ ಈಶ್ವರ ಹೆಗಡೆ ಎಂಬುವವರಿಂದ ನಾಗಪ್ಪ ಗೌಡ ಒಂದು ಎಕರೆ ಜಮೀನನ್ನು ಖರೀದಿಸಿದ್ದನು. ಆದರೆ, ಈ ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾರುತಿ ಹೆಗಡೆ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಕಾನೂನು ಹೋರಾಟವೇ ನಾಗಪ್ಪನ ಆಕ್ರೋಶಕ್ಕೆ ಮೂಲ ಕಾರಣ ಎನ್ನಲಾಗಿದೆ.
ಕಳೆದ ಜನವರಿ 17ರಂದು ಇದೇ ಜಮೀನಿನ ವಿಚಾರವಾಗಿ ಇಬ್ಬರ ನಡುವೆ ಜೋರು ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ತಾಳ್ಮೆ ಕಳೆದುಕೊಂಡ ಆರೋಪಿ ನಾಗಪ್ಪ ಗೌಡ, ಮಾರುತಿ ಹೆಗಡೆ ಅವರ ಮೇಲೆರಗಿ ಹಲ್ಲೆ ಮಾಡಿದ್ದಾನೆ. ಮಾರುತಿ ಅವರ ಹೊಟ್ಟೆಗೆ ಬಲವಾಗಿ ಒದ್ದು, ಅವರು ಕೆಳಗೆ ಬಿದ್ದಾಗ ಕಾಲಿನಿಂದ ತುಳಿದು ಅಟ್ಟಹಾಸ ಮೆರೆದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಕಸ ವಿಲೇವಾರಿ ಘಟಕದಲ್ಲಿ ಅಗ್ನಿ ಅವಘಡ; ಪಟ್ಟಣ ಪಂಚಾಯತ ವಿರುದ್ಧ ಜಾತಿ ತಾರತಮ್ಯದ ಗಂಭೀರ ಆರೋಪ
ಅಷ್ಟಕ್ಕೇ ನಿಲ್ಲದೆ ಸಮೀಪದಲ್ಲಿದ್ದ ಕಟ್ಟಿಗೆಯಿಂದ ಮನಬಂದಂತೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ತೀವ್ರ ರಕ್ತಸ್ರಾವ ಹಾಗೂ ಒಳಗಾಯಗಳಿಂದ ಬಳಲುತ್ತಿದ್ದ ಮಾರುತಿ ಅವರನ್ನು ಕೂಡಲೇ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಕಳೆದ ಕೆಲವು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೃತರ ಪುತ್ರಿ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆಸ್ತಿ ದ್ವೇಷವು ಒಂದು ಕುಟುಂಬದ ಆಧಾರಸ್ತಂಭವನ್ನೇ ಕಿತ್ತುಕೊಂಡಿರುವುದು ಅಲ್ಲದೆ ಕೊಲೆಯಲ್ಲಿ ಅಂತ್ಯ ವಾಗಿರುವುದು ದುರದೃಷ್ಟಕರ ಘಟನೆ ಆಗಿದೆ ಎಂದು ಗ್ರಾಮಸ್ಥರು ಮರುಕ ವ್ಯಕ್ತಪಡಿಸಿದ್ದಾರೆ.





