ಕುಮಟಾ: ರಾಜ್ಯದ ವಿವಿಧ ಭಾಗಗಳಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಈ ವರ್ಷ ಹೊಸದಾಗಿ 120 ಸೇತುವೆಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದರು.
ಸೋಮವಾರ ತಾಲ್ಲೂಕಿನ ಕಲಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮೂವತ್ತು ಗುಂಡಿ’ ಸೇತುವೆ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿ
ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಗಾಲದ ಸಮಯದಲ್ಲಿ ಸಂಪರ್ಕ ಕಡಿತಗೊಂಡು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ರಾಜ್ಯದ 12 ಜಿಲ್ಲೆಗಳಲ್ಲಿ ಸುಮಾರು 400 ಕಾಲು ಸಂಕಗಳನ್ನು ನಿರ್ಮಾಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲಾಗುವುದು. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಕುಮಟಾ ಹಾಗೂ ಹೊನ್ನಾವರ ಭಾಗಗಳಲ್ಲಿ ಹೆಚ್ಚು ಕಾಲು ಸಂಕಗಳ ಅವಶ್ಯಕತೆಯಿದ್ದು, ಶಿಥಿಲಾವಸ್ಥೆಯಲ್ಲಿರುವ ಹಳೆಯ ಸೇತುವೆಗಳ ಪುನರ್ ನಿರ್ಮಾಣಕ್ಕೆ ತಕ್ಷಣವೇ ಮಂಜೂರಾತಿ ನೀಡಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಜೊಯಿಡಾ | ರಾಮನಗರ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ದಾಳಿ: 90 ಲಕ್ಷ ಮೌಲ್ಯದ ENA(ಸ್ಪಿರಿಟ್) ಜಪ್ತಿ, ಇಬ್ಬರ ಬಂಧನ
ವಿಶೇಷವಾಗಿ ನದಿಯ ಹಿನ್ನೀರಿಗೆ ಸಮುದ್ರದ ಉಪ್ಪು ನೀರು ಸೇರಿ ರೈತರು ಸಂಕಷ್ಟಕ್ಕೆ ಒಳಗಾಗುತ್ತಿರುವುದನ್ನು ಮನಗಂಡು, ಸೇತುವೆಗಳ ಜೊತೆಗೆ ಬ್ಯಾರೇಜ್ ನಿರ್ಮಾಣ ಮಾಡುವ ಮೂಲಕ ರೈತರಿಗೆ ನೆರವಾಗುತ್ತಿದ್ದೇವೆ ಎಂದು ಸಚಿವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಅವರು, ಈ ಭಾಗದ ಜನರ ಬಹುಕಾಲದ ಕನಸಾಗಿದ್ದ ಸೇತುವೆ ಅಗಲೀಕರಣಕ್ಕೆ ಸಚಿವರು ತಕ್ಷಣ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಕೇವಲ 3 ಮೀಟರ್ ಇದ್ದ ಸೇತುವೆಯನ್ನು ಈಗ 9 ಮೀಟರ್‌ಗೆ ಅಗಲೀಕರಣ ಮಾಡಲಾಗುತ್ತಿದ್ದು, ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದಿಂದ ಗದ್ದೆಗಳಿಗೆ ಉಪ್ಪು ನೀರು ನುಗ್ಗುವುದನ್ನು ತಡೆಗಟ್ಟಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ಮಾಜಿ ಶಾಸಕಿ ಶಾರದ ಶೆಟ್ಟಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ್ ಸಿಇಒ ಡಾ. ದಿಲೀಪ್ ಶಶಿ ಸೇರಿದಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.





