ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಕಳೆದ ವಾರ ಮಹಿಳೆಯ ಕರಿಮಣಿ ಸರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೊರಚರಕೇರಿಯ ಸಂಜಯ್ ಎಲ್ (33) ಹಾಗೂ ದಾವಣಗೆರೆಯ ವಿನೋಬ ನಗರ ಮೂಲದ ವಸಂತ ಕುಮಾರ್ (30) ಎಂದು ಗುರುತಿಸಲಾಗಿದೆ. ಇವರಿಂದ ಸುಮಾರು ₹3 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರ, ₹8.20 ಲಕ್ಷ ಮೌಲ್ಯದ ಕಾರು ಹಾಗೂ ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಕ್ಟೋಬರ್ 3ರಂದು ಸಂಜೆ ವೇಳೆ ಮೀನಾಕ್ಷಿ ಎಂಬವರು ತಮ್ಮ ಮಗಳೊಂದಿಗೆ ಕುಂದಾಪುರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಶಾಸ್ತ್ರಿ ಪಾರ್ಕ್ ಕಡೆಗೆ ಸರ್ವಿಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಬಿಸ್ಸೆನ್ಬೆಲ್ ಕಚೇರಿ ಹತ್ತಿರ ಬೈಕ್‌ನಲ್ಲಿ ಬಂದ ಇಬ್ಬರು ಅಜ್ಞಾತರು ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕಸಿದು ಪರಾರಿಯಾದರು. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಕೈಗೊಂಡ ಕುಂದಾಪುರ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಜಯರಾಮ ಡಿ. ಗೌಡ ನೇತೃತ್ವದ ತಂಡ ತೀವ್ರ ತನಿಖೆ ನಡೆಸಿ, ಸಂಜಯ್ ಅನ್ನು ತೀರ್ಥಹಳ್ಳಿ ತಾಲೂಕಿನ ಮುಡಬಾ ಕ್ರಾಸ್‌ನಲ್ಲಿ ಹಾಗೂ ವಸಂತ ಕುಮಾರ್ ಅನ್ನು ದಾವಣಗೆರೆ ಜಿಲ್ಲೆಯ ಮಲೆ ಬೆನ್ನೂರು ಪ್ರದೇಶದಲ್ಲಿ ವಶಕ್ಕೆ ಪಡೆದು ಬಂಧಿಸಿದರು.
ಈ ಕಾರ್ಯಾಚರಣೆಯಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಜಯರಾಮ ಡಿ. ಗೌಡ ಅವರ ನೇತೃತ್ವದಲ್ಲಿ ಎಸ್ಸೈ ನಂಜಾನಾಯ್ಕ್ ಎನ್, ಎಸ್ಸೈ ಪುಷ್ಪಾ, ಸಂಚಾರ ಠಾಣೆಯ ಎಸ್ಸೈ ನೂತನ್ ಹಾಗೂ ಸಿಬ್ಬಂದಿಗಳಾದ ಮೋನ ಪೂಜಾರಿ, ಮೋಹನ್, ಸಂತೋಷ, ಪ್ರಿನ್ಸ್, ಮಂಜುನಾಥ, ಕಾನ್ಟೇಬಲ್ ಘನಶ್ಯಾಮ, ಲೋಹಿತ್, ಮೌನೇಶ್, ಕಿಶನ್, ರಾಜು ಭೋವಿ, ಮಹಾಬಲ, ರಾಘವೇಂದ್ರ ಗೌತಮ್, ನಾಗಶ್ರೀ ಮತ್ತು ವೃತ್ತ ಕಚೇರಿಯ ಅಣ್ಣಪ್ಪ ಸೇರಿದಂತೆ ಪೊಲೀಸರು ಭಾಗವಹಿಸಿದ್ದರು.





