ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರು–ನೇರಳಕಟ್ಟೆ ಮಾರ್ಗದ ಶೇಟ್ಟರಕಟ್ಟೆ ತಿರುವಿನಲ್ಲಿ ಇಂದು ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನೇರಳಕಟ್ಟೆಯಿಂದ ತಲ್ಲೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಿಸುತ್ತಿದ್ದ ಟಿಪ್ಪರ್ ವಾಹನವು ಎದುರುಗಡೆಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಸರಕಾರಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಬಲಭಾಗಕ್ಕೆ ತೀವ್ರ ಹಾನಿಯಾಗಿದೆ.
ಅಪಘಾತದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಒಟ್ಟು 15 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅವರಲ್ಲಿ 7 ಮಂದಿ ವಿದ್ಯಾರ್ಥಿಗಳಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಮೂರು ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳನ್ನು ಕುಂದಾಪುರದ ಸರಕಾರಿ ಆಸ್ಪತ್ರೆ ಹಾಗೂ ಆದರ್ಶ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಟಿಪ್ಪರ್ ಚಾಲಕ ರಾಘವೇಂದ್ರ ಎಂಬುವವರು ಕೂಡ ಗಾಯಗೊಂಡಿದ್ದು, ಅವರನ್ನು ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಅಪಘಾತದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಟಿಪ್ಪರ್ ವಾಹನಗಳು ಅತೀವೇಗವಾಗಿ ಸಂಚರಿಸುತ್ತಿರುವುದು ಅಮೂಲ್ಯ ಜೀವಗಳಿಗೆ ಅಪಾಯಕಾರಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ಅಜಾಗರೂಕತೆಯಿಂದ ಟಿಪ್ಪರ್‌ಗಳು ಸಂಚರಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಸಿಪಿಎಂ ಆರೋಪಿಸಿದೆ.
ಇಂತಹ ಸಾವು–ನೋವುಗಳನ್ನು ತಪ್ಪಿಸಲು ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಟಿಪ್ಪರ್‌ಗಳ ವೇಗಕ್ಕೆ ಕಡಿವಾಣ ಹಾಕಬೇಕು ಎಂದು ಸಿಪಿಎಂ ಜಿಲ್ಲಾ ಸಮಿತಿ ಒತ್ತಾಯಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಅವರು ಹಾರೈಸಿದ್ದಾರೆ.





