ವಂಡ್ಸೆ ಹಾಗೂ ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಸಹಯೋಗದಲ್ಲಿ, ಮಾಜಿ ಶಾಸಕರಾದ ಕೆ ಗೋಪಾಲ ಪೂಜಾರಿ ಅವರ ನೇತೃತ್ವದಲ್ಲಿ ಮಾರ್ಚ್ 3 ಮತ್ತು 4ರಂದು ವಾರಾಹಿ ಬಲದಂಡೆ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಹಾಗೂ ಸಿದ್ದಾಪುರ ಮತ್ತು ಸೌಕೂರು ಏತ ನೀರಾವರಿ ವ್ಯಾಪ್ತಿಯಲ್ಲಿ ನೀರಾವರಿ ಸೌಲಭ್ಯದಿಂದ ವಂಚಿತವಾಗಿರುವ ಕೃಷಿ ಭೂಮಿಗಳಿಗೆ ನೀರು ಒದಗಿಸುವಂತೆ ಸರ್ಕಾರದ ಗಮನ ಸೆಳೆಯಲು ಬ್ರಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದು, ವಾರಾಹಿ ನದಿ ನೀರನ್ನು ಕುಡಿಯಲು ಮತ್ತು ಕೃಷಿಗೆ ಬಳಸುವ ರೈತ ಬಂಧುಗಳು ಹಾಗೂ ಬಲದಂಡೆ ಯೋಜನೆಯ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ.
1979ರಲ್ಲಿ ಅಂದಿನ ಮುಖ್ಯಮಂತ್ರಿ ಆರ್ ಗುಂಡು ರಾವ್ ಅವರು ವಾರಾಹಿ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಳೆದಿದ್ದರೂ ವಾರಾಹಿ ಬಲದಂಡೆ ಯೋಜನೆಯ ಕಾಮಗಾರಿ ಆರಂಭವಾಗದೇ ಇರುವುದನ್ನು ಅವರು ವಿಷಾದಿಸಿದ್ದಾರೆ.
ಇದಲ್ಲದೆ, ಸಿದ್ದಾಪುರ ಏತ ನೀರಾವರಿ ಯೋಜನೆ ಹಾದುಹೋಗುವ ಪ್ರದೇಶಗಳ ಬಹುತೇಕ ಕೃಷಿಭೂಮಿಗಳಿಗೆ ಸಮರ್ಪಕ ನೀರಾವರಿ ಸೌಲಭ್ಯ ಒದಗಿಸದೇ ರೈತರನ್ನು ಹಾಗೂ ಕುಡಿಯುವ ನೀರು ಬೇಡಿಕೆದಾರರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆ ರೈತರು, ವಾರಾಹಿ ನದಿ ಪಾತ್ರದ ನಿವಾಸಿಗಳು ಹಾಗೂ ಕುಡಿಯುವ ನೀರು ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.





