ಗದಗ ಜಿಲ್ಲೆಯ ರೋಣ ತಾಲೂಕಿನ ಜನರಪಾಲಿನ ಶಕ್ತಿ ಕೇಂದ್ರವೆಂದರೆ ತಹಶೀಲ್ದಾರ್ ಕಚೇರಿ. ಇಲ್ಲಿಗೆ ಬರುವ ಸಾರ್ವಜನಿಕರಿಗೆ ಬೇಕಾದ ಮೂಲಸೌಕರ್ಯಗಳ ವ್ಯವಸ್ಥೆ ಅಷ್ಟಕ್ಕಷ್ಟೇ ಎಂಬಂತೆ ಇದೆ. ರೋಣ ತಹಶೀಲ್ದಾರ್ ಕಚೇರಿ ಕೊಠಡಿಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಮಾಡಿಕೊಂಡಿರುವ ಅಧಿಕಾರಿಗಳು ಜನರಿಗೆ ಬೇಕಾದ ಸೌಲಭ್ಯ ಒದಗಿಸಲು ಒಲವು ತೋರುತ್ತಿಲ್ಲ. ಶೌಚಾಲಯಗಳು ಗಬ್ಬೆದ್ದು ಹೋಗಿವೆ. ಇದರಿಂದ ದುರ್ನಾತ ಬೀರುತ್ತಿದ್ದ, ಉಪಯೋಗಕ್ಕೆ ಬಾರದಂತಾಗಿದೆ.
ತಹಶೀಲ್ದಾರ್ ಕಚೇರಿಗೆ ಒಳ ಪ್ರವೇಶಿಸಿದರೆ ಗಲೀಜು, ಕಸ, ಮೂಲೆಗಳಲ್ಲಿ ಗುಟ್ಕಾ, ಎಲೆ ಅಡಿಕೆ ತಿಂದು ಉಗುಳಿರುವ ದೃಶ್ಯ ಕಣ್ಣಿಗೆ ಚೀ ಎನಿಸುತ್ತದೆ. ಸಾರ್ವಜನಿಕರು ಕುಡಿಯುವ ನೀರಿಗಾಗಿ ಹುಡುಕಬೇಕಿದೆ.
ತಹಶೀಲ್ದಾರ್ ಕಚೇರಿಗೆ ನಿತ್ಯವೂ ಸಾವಿರಾರು ಜನರು ತಮ್ಮ ಕೆಲಸಗಳಿಗಾಗಿ ಬರುತ್ತಾರೆ. ಆದರೆ ಯಾವುದೇ ಮೂಲಭೂತ ಸೌಕರ್ಯ ಇಲ್ಲವಾಗಿದೆ. ನೆಪಮಾತ್ರಕ್ಕೆ ಶೌಚಾಲಯಗಳು ಇದ್ದರೂ ಸರಿಯಾದ ನಿರ್ವಹಣೆ ಇಲ್ಲದೆ ಜನರು ಪರದಾಡುವಂತಾಗಿದೆ. ಗಂಡಸರು, ಮಹಿಳೆಯರು ಗೋಡೆ ಮರೆಯಲ್ಲಿ, ಗಿಡಗಂಟಿ ಮರೆಯಲ್ಲಿ, ಬಯಲಿಗೆ ಹೋಗುವ ಶೌಚಕ್ಕೆ ಹೋಗುವ ಪರಿಸ್ಥಿತಿ ಉಂಟಾಗಿದೆ.

ಕಚೇರಿಯಲ್ಲಿ ನಾಲ್ಕು ಶೌಚಾಲಯಗಳಿದ್ದು, ಒಂದು ಕಚೇರಿಯೊಳಗೆ ಇರುವ ಶೌಚಾಲಯಕ್ಕೆ ಬೀಗ ಹಾಕಿದ್ದಾರೆ. ಎರಡನೆದ್ದು ಕಚೇರಿ ಕಟ್ಟಡದ ಮೇಲಂತಸ್ತಿನಲ್ಲಿ ದೊಡ್ಡದಾದ ಶೌಚಾಲಯವಿದ್ದು, ನಿರ್ವಹಣೆ ಇಲ್ಲದೆ ಗಬ್ಬುನಾತ ಬೀರುತ್ತಿದೆ. ಮೂರನೇಯದ್ದು ಕಚೇರಿ ಹಿಂದೆ ಇರುವ ಶೌಚಾಲಯದಲ್ಲಿ ಪ್ಲಾಸ್ಟಿಕ್ ಹಾಳೆ, ನೀರಿನ ಬಾಟಲಿ, ಸಾರಾಯಿ ಪ್ಯಾಕೆಟ್ ತುಂಬಿದ್ದು, ವಾಂತಿಯಾಗುವಷ್ಟು ನಾರುತ್ತಿದೆ. ನಾಲ್ಕನೇದ್ದು ಕಚೇರಿ ಪ್ರವೇಶಿಸುವ ಗೇಟಿನ ಪಕ್ಕದಲ್ಲಿ ಇರುವ ಶೌಚಾಲಯ ಹೊಸದಾಗಿ ಕಟ್ಟಿಸಿದ್ದರೂ ಸರಿಯಾದ ನಿರ್ವಹಣೆ ಇಲ್ಲದೆ ಬಳಕೆಯಾಗದ ಸ್ಥಿತಿಯಲ್ಲಿದೆ.

ತಹಶೀಲ್ದಾರ್ ಕಚೇರಿ ಒಳಗಿರುವ ಗಾರ್ಡನ್ ಆವರಣದಲ್ಲಿ ಸ್ವಚ್ಛತೆ ಇಲ್ಲದೆ ಸಾರ್ವಜನಿಕರ ಕಣ್ಣಿಗೆ ಅಸಹ್ಯ ಅನಿಸುತ್ತದೆ. ಗುಟ್ಕಾ ಚೀಟಿ, ಹಾಳೆ, ಪ್ಲಾಸ್ಟಿಕ್ ಕಾಣಸಿಗುತ್ತವೆ. ಗುಟ್ಕಾ ತಿಂದು ಉಗುಳಿರುವುದು ಗಬ್ಬು ವಾಸನೆ ಬೀರುತ್ತಿದೆ. ಕಚೇರಿ ಮೂಲೆಗಳಲ್ಲಿ, ಮಹಡಿಗೆ ಹೋಗುವ ಮೆಟ್ಟಿಲು ಗೋಡೆಗೆ ಗುಟ್ಕಾ ತಿಂದು ಉಗುಳಿರುವುದು ಕಂಡುಬಂದಿದ್ದು, ಗೋಡೆಯ ಕಳೆಗುಂದಿದೆ. ಅಲ್ಲದೆ ಸಾರ್ವಜನಿಕರು ಕಣ್ಣು, ಮೂಗು ಮುಚ್ಚಿಕೊಂಡು ಹೋಗುವ ದುಃಸ್ಥಿತಿ ಎದುರಾಗಿದೆ.

ಕಚೇರಿ ಸುತ್ತಲೂ ಕಸ ಗಿಡಗಂಟಿ, ಪ್ಲಾಸ್ಟಿಕ್
ತಹಶೀಲ್ದಾರ್ ಕಚೇರಿಯ ಎಡ ಭಾಗದಲ್ಲಿ ಸ್ವಚ್ಛತೆ ಇಲ್ಲದೆ ಕಸದಿಂದ ತುಂಬಿದೆ. ಅಲ್ಲದೆ ಗಿಡಗಂಟಿ ಬೆಳೆದು ನಿಂತಿದೆ. ಹುಳ ಉಪ್ಪಡಿ ಹೆಚ್ಚಾಗುವ ಸಾಧ್ಯತೆ ಇದೆ. ಕಚೇರಿಯ ಹಿಂಭಾಗದಲ್ಲಿ ಕಚೇರಿ ಸಿಬ್ಬಂದಿಗಳೇ ಟೀ ಕುಡಿದು, ತಿಂಡಿಗೆ ತಂದ ಹಾಳೆ, ಪೊಟ್ಟಣ, ಪ್ಲಾಸ್ಟಿಕ್, ಕಸ ಎಸೆದಿರುವುದೇ ರಾಶಿ ರಾಶಿ ಕಾಣಿಸುತ್ತಿದ್ದು, ಸ್ವಚ್ಛತೆ ಇಲ್ಲದಂತಾಗಿದೆ.

ಅಡ್ಡಾಡಿದ್ದಿ ವಾಹನ ನಿಲುಗಡೆ
ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ವಿಶಾಲವಾದ ಆವರಣವಿದ್ದರೂ ಸರಿಯಾಗಿ ಪಾರ್ಕಿಂಗ್ ಮಾಡುವುದಿಲ್ಲ. ಎಲ್ಲಿಬೇಕೆಂದರಲ್ಲಿ ಬೈಕ್ ಪಾರ್ಕಿಂಗ್ ಮಾಡಿರುದುವುದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ.
ಈ ಕುರಿತು ಈ ದಿನ.ಕಾಮ್ ಜತೆಗೆ ಸಾರ್ವಜನಿಕರು ಶಶಿಧರ ಹಿರೇಮಣಿ ಮಾತನಾಡಿ, “ಸಾರ್ವಜನಿಕರು ಕೆಲಸದ ನಿಮಿತ್ಯ ತಹಶೀಲ್ದಾರ್ ಕಚೇರಿಗೆ ನೂರಾರು ಜನರು ಬರುತ್ತಾರೆ. ಅವರಿಗೆ ಶೌಚಾಲಯಕ್ಕೆ ಹೋದರೆ ಗಬ್ಬು ವಾಸನೆ ಬರುತ್ತದೆ. ಅಲ್ಲಿ ಸರಿಯಾದ ನೀರಿನ ವ್ಯವಸ್ಥೆಯೂ ಇಲ್ಲ. ಗಂಡಸರು ಹೇಗೋ ಎಲ್ಲೋ ಶೌಚಕ್ಕೆ ಹೋಗುತ್ತಾರೆ. ಆದರೆ ಮಹಿಳೆಯರು ಎಲ್ಲಿ ಹೋಗಬೇಕು? ಹಾಗಾಗಿ ಕೂಡಲೇ ಸ್ವಚ್ಛಗೊಳಿಸಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿದ್ದೀರಾ? ಕಲಬುರಗಿ | ಚಿತ್ತಾಪುರ ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ವಿಚಾರಣೆ ನ.13ಕ್ಕೆ ಮುಂದೂಡಿಕೆ
ಈ ದಿನ.ಕಾಮ್ ಜತೆಗೆ ಸಾರ್ವಜನಿಕ ಸತೀಶ್ ಮಾತನಾಡಿ, “ಕಚೇರಿಗೆ ಬರುವ ಜನರು ಎಲೆ ಅಡಿಕೆ ತಿಂದು ಉಗುಳುತ್ತಾರೆ. ಇದನ್ನು ಕಟ್ಟುನಿಟ್ಟಾಗಿ ನಿಯಂತ್ರಣ ಮಾಡಬೇಕು” ಎಂದು ಹೇಳಿದರು.
ಅವ್ಯವಸ್ಥೆಗೆ ಸಂಬಂಧಿಸಿದಂತೆ ಈ ದಿನ.ಕಾಮ್ ತಹಶೀಲ್ದಾರ್ ನಾಗರಾಜ ಕೆ ಅವರನ್ನು ಭೇಟಿ ಮಾಡಿದಾಗ ಮಾತನಾಡಿದ್ದು, “ಶೌಚಾಲಯಗಳನ್ನು ಹೊಸದಾಗಿ ಕಟ್ಟಿಸಿದ್ದು, ಸಾರ್ವಜನಿಕರು ಅವುಗಳನ್ನು ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಉಳಿದ ಶೌಚಾಲಯಯಗಳನ್ನು ಸ್ವಚ್ಛತೆ ಮಾಡಿಸಲಾಗುವುದು” ಎಂದು ಹೇಳಿದರು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.




