- ಜಿಲ್ಲೆಯ ಶಾಲಾ-ಕಾಲೇಜಿನ 75 ಸಾವಿರ ವಿದ್ಯಾರ್ಥಿಗಳಿಗೆ ದೇಶಾಭಿಮಾನದ ಉಪನ್ಯಾಸ.
- ದೇಶದ ನೈಜ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವುದು ತುಂಬಾ ಅಗತ್ಯ.
ಇಂದಿನ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಕಡಿಮೆಯಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಮಹಾತ್ಮರ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹೀಗಾಗಿ ನನ್ನ ವೃತ್ತಿಯ ಬಿಡುವಿನ ವೇಳೆ ಹಾಗೂ ರಜಾ ದಿನಗಳಲ್ಲಿ ಜಿಲ್ಲೆಯ ವಿವಿಧ ಶಾಲಾ-ಕಾಲೇಜಿನ 75 ಸಾವಿರ ವಿದ್ಯಾರ್ಥಿಗಳಿಗೆ ದೇಶಾಭಿಮಾನದ ಕುರಿತು ಉಪನ್ಯಾಸ ನೀಡಲು ಸಂಕಲ್ಪ ಮಾಡಿದ್ದೇನೆ ಎಂದು ಔರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಓಂಪ್ರಕಾಶ ದಡ್ಡೆ ಹೇಳಿದರು.
ಔರಾದ ತಾಲೂಕಿನ ಧರಿ ಹನುಮಾನ್ ಸಮೀಪದ ಜ್ಞಾನಭಾರತಿ ಪ್ರೌಢ ಶಾಲೆಯಲ್ಲಿ ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸವಿ ನೆನಪಿಗಾಗಿ ಜಿಲ್ಲೆಯ 75 ಸಾವಿರ ವಿದ್ಯಾರ್ಥಿಗಳಿಗೆ ದೇಶಭಕ್ತಿ ಬಿಂಬಿಸುವ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಭಿಯಾನದ ನೇತ್ರತ್ವ ವಹಿಸಿ ಅವರು ಮಾತನಾಡಿದರು.
ನಿವೃತ್ತ ಯೋಧ ಮಹಾದೇವ ಕೋಟೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, “ದೇಶದ ಸ್ವಾತಂತ್ರ್ಯ ಚಳವಳಿಯ ಹೋರಾಟಗಾರರನ್ನು ಸ್ಮರಿಸುವುದು ಅನಿವಾರ್ಯವಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ- ಯುವ ಜನಾಂಗಕ್ಕೆ ಮಹಾತ್ಮರ ಆದರ್ಶಗಳನ್ನು ಮುಟ್ಟಿಸುವ ಕಾರ್ಯ ಕೈಗೊಂಡಿರುವ ಈ ಓಂಪ್ರಕಾಶ ದಡ್ಡೆ ಅವರ ಉದ್ದೇಶ ಶ್ಲಾಘನೀಯ” ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪತ್ರಕರ್ತ ಬಾಲಾಜಿ ಕುಂಬಾರ್ ಮಾತನಾಡಿ, ” ಅಂದು ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಾತ್ಮರು ತ್ಯಾಗ ಬಲಿದಾನಗೈದಿದ್ದಾರೆ. ಇಂದು ಅದೇ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ, ದೇಶದ ನೈಜ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ತಿಳಿಸುವುದು ತುಂಬಾ ಅಗತ್ಯವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಕ್ರಮ ಆಸ್ತಿ ಆರೋಪ; ಕಾನ್ಸ್‌ಟೇಬಲ್ ಮನೆ ಮೇಲೆ ಲೋಕಾಯುಕ್ತ ದಾಳಿ
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳಾದ ಮಧುಕರ ಬಂಗಾರೆ, ಚಿರಂಜೀವಿ ಪಾಟೀಲ, ಶಿವಾನಂದ ಕೋಟೆ, ಕಲ್ಲಪ್ಪ ಪಾಂಚಾಳ ಸೇರಿದಂತೆ ಶಾಲಾ ವಿದ್ಯಾರ್ಥಿಗಳು , ಸಿಬ್ಬಂದಿ ಉಪಸ್ಥಿತರಿದ್ದರು.





