- ಕಂದಾಯ ಅಧಿಕಾರಿಗಳಿಂದ ಸಾರ್ವಜನಿಕರು ಹಲವು ಸಮಸ್ಯೆಗಳು ಎದುರಿಸುತ್ತಿದ್ದಾರೆ.
- ರಾಜ್ಯದ ಸರ್ಕಾರಿ ಇಲಾಖೆಗಳ ನಿವೇಶನವನ್ನು ಸರ್ವೆ ನಡೆಸಿ ಆಸ್ತಿ ಕಾಪಾಡಬೇಕು
ಸರ್ಕಾರದ ಆಸ್ತಿಗಳನ್ನು ಸಾರ್ವಜನಿಕರ ಪಾಲಾಗದಂತೆ ತಡೆಗಟ್ಟಲು ಕಂದಾಯ ಇಲಾಖೆ ಕೂಡಲೇ ಕ್ರಮ ಕೈಗೊಳ್ಳುವಂತೆ ವಿಶ್ವಕ್ರಾಂತಿ ದಿವ್ಯಪೀಠ ಟ್ರಸ್ಟ್ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಆಗ್ರಹಿಸಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಗುರುವಾರ ಬೀದರ್ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದರು.
“ಜಿಲ್ಲೆಯ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ನಿಗದಿತ ಸ್ಥಳದಲ್ಲಿ ವಾಸ ಮಾಡದ ಕಾರಣ ಸಾರ್ವಜನಿಕರು ಹಲವು ಸಮಸ್ಯೆಗಳು ಎದುರಿಸುತ್ತಿದ್ದಾರೆ. ಭೂ ದಾಖಲೆ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಕಂದಾಯ ಇಲಾಖೆ ಅಧಿಕಾರಿಗಳನ್ನು ಹುಡುಕಲು ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಅಧಿಕಾರಿಗಳು ಎಲ್ಲಿ ಸಿಗುತ್ತಾರೆ ಎಂಬುದು ನಿಖರವಾಗಿಲ್ಲ, ಇನ್ನು ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುವುದಿಲ್ಲ, ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಸರ್ಕಾರ ಕಂದಾಯ ಇಲಾಖೆಯ ಸದರಿ ಅಧಿಕಾರಿಗಳಿಗೆ ನಿಗದಿತ ಸ್ಥಳ ಗೊತ್ತುಪಡಿಸಿ ಸಾರ್ವಜನಿಕರ ಹಿತ ಕಾಪಾಡಬೇಕೆಂದು” ಅವರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ ? ರೈತರಿಗೆ ಬರಗಾಲದ ದಿಗಿಲು; ಅಧಿಕಾರಿಗಳಿಗೆ ಪರಿಹಾರದ ಫಸಲು!
“ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಇಲಾಖೆಗಳ ನಿವೇಶನವನ್ನು ಸರ್ವೆ ನಡೆಸಿ ಸರ್ಕಾರದ ಆಸ್ತಿ ಕಾಪಾಡಬೇಕು. ಸರ್ಕಾರಿ ಖಾಲಿ ನಿವೇಶನ ಹಾಗೂ ಕಟ್ಟಡಗಳಿಗೆ ಸುತ್ತುಗೋಡೆ ನಿರ್ಮಿಸಬೇಕು. ಇನ್ನು ವಿವಿಧ ಇಲಾಖೆಗಳಿಗೆ ತಮ್ಮ ಇಲಾಖೆಗಳ ಜಾಗ ಎಷ್ಟಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಇದರಿಂದ ಸರ್ಕಾರಿ ಆಸ್ತಿಗಳನ್ನು ಒತ್ತುವರಿ ಮೂಲಕ ಉಳ್ಳವರ ಪಾಲಾಗುತ್ತಿದೆ. ಕೂಡಲೇ ಈ ಬಗ್ಗೆ ಪರಿಶೀಲಿಸಿ ಎಲ್ಲಾ ಇಲಾಖೆಗಳ ಭೂ ಆಸ್ತಿ ಕುರಿತು ದಾಖಲೆ ಸಂಗ್ರಹಿಸಿ ಸರ್ಕಾರದ ಆಸ್ತಿ ರಕ್ಷಿಸಬೇಕೆಂದು” ಆಗ್ರಹಿಸಿದರು.




