ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲ್ಲೂಕು ಹೂನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ತೆಲೆಕ್ಕಟ್ಟು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ತೀವ್ರವಾಗಿದ್ದು, ಕೂಡಲೇ ನೀರಿನ ಶುದ್ಧೀಕರಣ ಘಟಕವನ್ನು ಮಂಜೂರು ಮಾಡುವಂತೆ ಗ್ರಾಮಸ್ಥರು ತಾಲ್ಲುಕು ಪಂಚಾಯತಿ ಕಾರ್ಯಾಲಯಕ್ಕೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮದಲ್ಲಿ ಸುಮಾರು 900 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಲಭ್ಯವಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ನೀರಿನಲ್ಲಿ ಪ್ಲೋರೈಡ್ ಅಂಶ ಅಧಿಕವಾಗಿರುವುದರಿಂದ ಗ್ರಾಮಸ್ಥರು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ಮೊಣಕಾಲು, ಕೈ, ಕಾಲು ನೋವು, ಮಕ್ಕಳಲ್ಲಿ ಹಲ್ಲುಗಳ ತೊಂದರೆ ಸೇರಿದಂತೆ ಹಲವು ಕಾಯಿಲೆಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಆಗ್ರಹಿಸಿದರು.
ನೀರಿನ ದೂಷಣದಿಂದ ಜನರಲ್ಲಿ ವಿವಿಧ ರೋಗಗಳು ಕಾಣಿಸಿಕೊಂಡಿದ್ದು, ದಿನನಿತ್ಯದ ಜೀವನವೇ ಕಷ್ಟಕರವಾಗಿದೆ. ಇದರಿಂದಾಗಿ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ ನೀರಿನ ಘಟಕವನ್ನು ತುರ್ತಾಗಿ ಮಂಜೂರು ಮಾಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ನಿಗದಿತ ಸ್ಥಳ ಬದಲಾಗಿ ಬೇರೆಡೆ ಲ್ಯಾಂಡ್; ಸಿಎಂ–ಸಚಿವರ ಹೆಲಿಕಾಪ್ಟರ್ ಗೊಂದಲ
ಗ್ರಾಮದ ಸಾರ್ವಜನಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹಾಗೂ ಸಂಬಂಧಿತ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.





