ಬಾಲಕರ ವಸತಿ ನಿಲಯದಲ್ಲಿ ಅಸ್ವಚ್ಚತೆ, ಕುಡಿಯುವ ನೀರು ಹಾಗೂ ಮೂಲ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ನಿಲಯದ ಶೌಚಾಲಯಗಳು ಸ್ವಚ್ಛತೆ ಇಲ್ಲದೆ ದುರ್ಗಂಧ ಬೀರುತ್ತಿದ್ದು, ವಿದ್ಯಾರ್ಥಿಗಳಿಗೆ ಅನಾರೋಗ್ಯದ ಭೀತಿ ಹೆಚ್ಚಾಗಿದೆ.
ಲಿಂಗಸೂಗೂರು ನಗರದ ಕರಡಕಲ್ ಗ್ರಾಮದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಸುಮಾರು 150 ವಿದ್ಯಾರ್ಥಿಗಳಿದ್ದಾರೆ. ಹಲವು ದಿನಗಳಿಂದ ವಸತಿ ನಿಲಯದ ಮಕ್ಕಳು ವಸತಿ ನಿಲಯದಲ್ಲಿ ಶೌಚಾಲಯ ಕೋಣೆಗಳು, ಸ್ನಾನದ ಕೋಣೆಗಳು ಸೇರಿದಂತೆ ಮೂಲ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಈ ಬಗ್ಗೆ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಮುಖಂಡ ದುರುಗಪ್ಪ ಮಾತನಾಡಿ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಿಲಯದಲ್ಲಿ ಅಸ್ವಚ್ಚತೆಯಿಂದ ಶೌಚಾಲಯಗಳು ಇರುವುದರಿಂದ ವಿದ್ಯಾರ್ಥಿಗಳು ಸ್ನಾನಕ್ಕೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ. ಸ್ನಾನದ ಕೋಣೆಗಳಲ್ಲಿಯೂ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ವಸತಿ ನಿಲಯದ ಅಸ್ತವ್ಯಸ್ತತೆ ಕುರಿತು ಮೇಲಾಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲ. ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು, ಮಕ್ಕಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅವರು ದೂರಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ನಿಗದಿತ ಸ್ಥಳ ಬದಲಾಗಿ ಬೇರೆಡೆ ಲ್ಯಾಂಡ್; ಸಿಎಂ–ಸಚಿವರ ಹೆಲಿಕಾಪ್ಟರ್ ಗೊಂದಲ
ವಸತಿ ನಿಲಯದ ಸಮಸ್ಯೆಗಳನ್ನು ಬಗೆಹರಿಸಬೇಕು ಹಾಗೂ ನಿಲಯದ ವಾರ್ಡನ್ ಅವರನ್ನು ಅಮಾನತುಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿಲಯದ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.





