ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯ ಕರ್ತವ್ಯನಿಷ್ಠ ವೈದ್ಯರ ಮೇಲಿನ ಹಣ ಬೇಡಿಕೆಯ ಆರೋಪಗಳು ಕಪೋಲಕಲ್ಪಿತವಾಗಿದ್ದು, ಸತ್ಯಕ್ಕೆ ದೂರವಾದವು ಎಂದು ಎಸ್ ಸಿ ಎಸ್ ಟಿ ದೌರ್ಜನ್ಯ ತಡೆ ಸಮಿತಿ ಮುಖಂಡ ಮೋಹನ್ ಗೋಸ್ಲೇ ತೀವ್ರವಾಗಿ ಖಂಡಿಸಿದ್ದಾರೆ.
ಶ್ರೀಮತಿ ಉಮಾಮಹೇಶ್ವರಿ ವೈದ್ಯರು ದಲಿತ ಸಮುದಾಯಕ್ಕೆ ಸೇರಿದವರಾಗಿರುವುದೇ ಕೆಲವರ ಅಸಹ್ಯ ರಾಜಕಾರಣಕ್ಕೆ ಕಾರಣವಾಗಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವೈದ್ಯರನ್ನು ಗುರಿಯಾಗಿಸಿಕೊಂಡು ವಿನಾಕಾರಣ ಕಿರುಕುಳ ನೀಡುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಆಸ್ಪತ್ರೆಯಲ್ಲಿ ಅತಿ ಹೆಚ್ಚು ಜನಗಣತಿ (Census) ಅಥವಾ ಹೆರಿಗೆ ಚಿಕಿತ್ಸೆಯನ್ನು ನೀಡಿದವರು ಯಾರು? ಶ್ರದ್ಧೆಯಿಂದ ಕೆಲಸ ಮಾಡಿದವರು ಯಾರು? ಎಂಬುದನ್ನು ಬಹಿರಂಗಪಡಿಸಲಿ. ಅಂಕಿ-ಅಂಶಗಳನ್ನು ಪರಿಶೀಲಿಸಿದರೆ ಸತ್ಯ ಸ್ವತಃ ಹೊರಬರುತ್ತದೆ. ಸುಳ್ಳು ದೂರುಗಳು ಮತ್ತು ನಿರಂತರ ಕಿರುಕುಳದ ಪರಿಣಾಮವಾಗಿ ಹೊಸ ವೈದ್ಯರು ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ತಾಲ್ಲೂಕಿನ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮಸ್ಕಿ | ಸಾರಿಗೆ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ; ಸವಾರ ಸಾವು
ಅಗತ್ಯ ದಾಖಲೆಗಳೊಂದಿಗೆ ಮುಂದಿನ ದಿನಗಳಲ್ಲಿ ಸತ್ಯವನ್ನು ಸಾರ್ವಜನಿಕವಾಗಿ ಬಯಲಿಗೆಳೆಯಲಾಗುವುದು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ವಿಚಾರದಲ್ಲಿ ಗಮನಹರಿಸಿ, ಸತ್ಯಾಸತ್ಯತೆಯನ್ನು ಜನರ ಮುಂದಿಡಬೇಕು ಎಂದು ಆಗ್ರಹಿಸಿದರು.




