ಲಿಂಗಸೂಗೂರು ತಾಲ್ಲೂಕಿನ ಕೃಷಿ ಉಪ ನಿರ್ದೇಶಕರ ಕಚೇರಿಯನ್ನು ಸಿಂಧನೂರು ತಾಲ್ಲೂಕಿಗೆ ಸ್ಥಳಾಂತರಕ್ಕೆ ಹೊರಡಿಸಿರುವ ಆದೇಶವನ್ನು ಕೂಡಲೇ ರದ್ದುಪಡಿಸಲು ಸ್ಥಳೀಯ ಶಾಸಕ ಮಾನಪ್ಪ ವಜ್ಜಲ ಅವರು ಬೆಳಗಾವಿ ಅಧಿವೇಶನದಲ್ಲಿ ಮಾತನಾಡಬೇಕು ಎಂದು ಆಗ್ರಹಿಸಿ ಲಿಂಗಸೂಗೂರು ತಾಲೂಕು ಅಭಿವೃದ್ಧಿ ಸಮಿತಿ ವತಿಯಿಂದ ಶಾಸಕ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸ್ಥಳಾಂತರ ವಿರೋಧಿಸಿ ಸುಮಾರು ೧೫ ದಿನಗಳಿಂದ ಹೋರಾಟ ನಡೆಯುತ್ತಿದ್ದರು ಇತ್ತ ಕಡೆ ಗಮನಹರಿಸುತ್ತಿಲ್ಲ ಮತ್ತು ಸ್ಥಳೀಯರಾದ ಮಾಜಿ ಸಚಿವರು ಹಾಗೂ ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ ಈ ಕ್ಷೇತ್ರದಿಂದಲೇ ಸಚಿವರು ಸಂಸದರಾಗಿದ್ದು, ಇವರ ಇಚ್ಚಾಶಕ್ತಿ ಕೊರತೆಯಿಂದ ಲಿಂಗಸುಗೂರಿನ ಒಂದೊಂದೇ ಕಚೇರಿಗಳು ಸ್ಥಳಾಂತರವಾಗುತ್ತಿವೆ ಎಂದು ಆಗ್ರಹಿಸಿದರು.
ಲಿಂಗಸೂಗೂರು ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಸ್ಥಳೀಯರಾದ ಹಾಲಿ ವಿಧಾನ ಪರಿಷತ್ತು ಸದಸ್ಯರು ತಮ್ಮ ಸ್ವಅಭಿವೃದ್ಧಿಗೆ ಹೆಚ್ಚು ಹೊತ್ತು ನೀಡುತ್ತಿದ್ದಾರೆ. ವಿನಹ ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಗಮನಹರಿಸುತ್ತಿಲ್ಲ. ಈಗಾಗಲೇ ತಾಲೂಕಿನ ಮಂಜೂರಾತಿ ಹಂತದಲ್ಲಿದ್ದ ಪ್ರಾದೇಶಿಕ ಸಾರಿಗೆ ಕಚೇರಿ ,ಕೆಪಿಟಿಸಿಎಲ್ ಕಚೇರಿ ಹಾಗೂ ಜಿಲ್ಲಾ ನ್ಯಾಯಾಲಯ ಸೇರಿ ತಾಲೂಕಿನ ಒಂದೊಂದಾಗಿ ಕಚೇರಿಗಳು ಸ್ಥಳಾಂತರವಾಗುತ್ತಿವೆ. ತಾಲೂಕಿನ ಅಭಿವೃದ್ಧಿ ಶೂನ್ಯ, ತಮ್ಮಿಂದಾಗಿ ಕ್ಷೇತ್ರ ಕುಂಠಿತಗೊಂಡಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು
ಒಂದು ವಾರದಲ್ಲಿ ಕೃಷಿ ನಿರ್ದೇಶಕರ ಕಚೇರಿ-2 ಸ್ಥಳಾಂತರ ಆದೇಶವನ್ನು ರದ್ದುಪಡಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಹೋರಾಟ ಸಮಿತಿ ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಒಳ ಮೀಸಲಾತಿ ಜಾಥಾ ತಡೆ; ಪ್ರತಿಭಟನಾಕಾರರ ಬಂಧನ ಖಂಡಿಸಿ ಪ್ರತಿಭಟನೆ
ಈ ವೇಳೆ ಸಮಿತಿಯ ಮುಖಂಡರಾದ ರಮೇಶ ವೀರಾಪೂರು, ಶಿವಪುತ್ರಪ್ಪಗೌಡ, ಹಾಜಿಬಾಬು ಕಟ್ಟಿಮನಿ, ಬಾಬಾಜಾನಿ ಇದ್ದರು.




