ಬೀದರ್ ತಾಲ್ಲೂಕಿನ ಕಮಠಾಣ ರಸ್ತೆಯಲ್ಲಿರುವ ಪಶು ವಿವೇಕ ಕ್ರೀಡಾಂಗಣದಲ್ಲಿ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 20ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿರುವ ಮೂರು ದಿನಗಳ ಜಾನುವಾರು, ಕುಕ್ಕುಟ ಮತ್ತು ಮತ್ಸ್ಯಮೇಳ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಶುಕ್ರವಾರ ಚಾಲನೆ ನೀಡಿದರು.
ರಾಜ್ಯಮಟ್ಟದ ಬೃಹತ್ ಪಶು ಮೇಳದಲ್ಲಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಚಿಕ್ಕಬಳ್ಳಾರಿ ಗ್ರಾಮದ ಪ್ರಗತಿಪರ ರೈತ ಶ್ರೀನಿವಾಸರಾಜು ಅವರು ರೈತರಿಗೆ ಹೊಸ ತಳಿಯ ಎತ್ತು ಪರಿಚಯಿಸಲು ತಂದಿದ್ದಾರೆ.
ರೈತ ಶ್ರೀನಿವಾಸರಾಜು ಅವರ ಪ್ರದರ್ಶನಕ್ಕೆ ತಂದಿರುವ ₹9 ಲಕ್ಷ ಮೌಲ್ಯದ ಗುಜರಾತಿನ ಗಿರ್ ತಳಿಯ ಏಳು ವರ್ಷದ ಎತ್ತಿನ ಬೆಲೆ ಕೇಳಿ ಜನ ಹೌಹಾರುತ್ತಿದ್ದಾರೆ.

ಪ್ರಗತಿಪರ ರೈತ ಶ್ರೀನಿವಾಸರಾಜು ತಮ್ಮ 50ಕ್ಕೂ ಹೆಚ್ಚಿನ ಎಕರೆ ಜಮೀನಿನಲ್ಲಿ ಕೃಷಿಯ ಜತೆಗೆ ಜಾನುವಾರು ಸಾಕಣೆ ಮಾಡುತ್ತಿದ್ದಾರೆ. ಅಪರೂಪದ ತಳಿಗಳನ್ನು ಸಾಕಾಣಿಕೆ ಮಾಡಿ ತಳಿ ಅಭಿವೃದ್ಧಿ ಪಡಿಸುತ್ತಿದ್ದಾರೆ.
ಎತ್ತು ವಯಸ್ಸಿನಲ್ಲಿ ಚಿಕ್ಕದಾಗಿದ್ದರೂ ಆಗಲೇ ಒಂದು ಟನ್ ಭಾರ ಹೊರುವ ಸಾಮರ್ಥ್ಯ ಇದೆ. ಈ ಬೆಲೆಬಾಳುವ ಎತ್ತು ಕೆಲ ತಿಂಗಳ ಹಿಂದೆ ರಾಯಚೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಪ್ರದರ್ಶಿಸಿದ್ದರು.

ಬೃಹದಾಕಾರದ ಜಾನುವಾರುಗಳನ್ನು ಜನ ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ಇವುಗಳ ಬೆಲೆ ಕೇಳಿ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುತ್ತಿದ್ದಾರೆ. ಮೇಳ ವೀಕ್ಷಣೆಗೆ ಬಂದ ವಿದ್ಯಾರ್ಥಿಗಳು, ರೈತರು ಅದರ ಮುಂದೆ ನಿಂತುಕೊಂಡು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
₹3 ಲಕ್ಷದ ಜಾಫ್ರಾಬಾದಿ ಎಮ್ಮೆ :
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಪ್ರಗತಿಪರ ರೈತರೊಬ್ಬರು ಪ್ರದರ್ಶನಕ್ಕೆ ತಂದಿರುವ ಜಾಫ್ರಾಬಾದಿ ಎಮ್ಮೆ ಗಮನ ಸೆಳೆಯುತ್ತಿದೆ. ₹3 ಲಕ್ಷ ಮೌಲ್ಯದ ಈ ಎಮ್ಮೆ ದಿನಕ್ಕೆ 22 ಲೀಟರ್ ಹಾಲು ಕೊಡುತ್ತದೆ ಎಂದು ರೈತ ವಿವರಿಸಿದರು.
90 ಕೆಜಿ ತೂಕದ ಮೇಕೆ ಬೆಲೆ ₹1.20 ಲಕ್ಷ :
ಬೀದರ್ ತಾಲ್ಲೂಕಿನ ಮರಖಲ ಗ್ರಾಮದ ರೈತ ಅಜರೋದ್ದಿನ್ ಎಂಬುವವರು ಪಶು ಮೇಳದಲ್ಲಿ ಪ್ರದರ್ಶನಕ್ಕೆ ತಂದಿರುವ ರಾಜಸ್ಥಾನ ಮೂಲದ ಕೋಟಾ ತಳಿಯ ಗಂಡು ಮೇಕೆ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.
ಈ ಮೇಕೆ ಮೂರು ತಿಂಗಳ ಮರಿ ಇರುವಾಗ ರಾಜಸ್ಥಾನದಿಂದ 18 ಸಾವಿರಕ್ಕೆ ಖರೀದಿಸಿದ್ದೇನೆ. ಆವಾಗ 12ಕೆಜಿ ತೂಕ ಇತ್ತು. ಈಗ ಎರಡೂವರೆ ವರ್ಷದ ಈ ಮೇಕೆ 90 ಕೆಜಿ ತೂಕವಿದೆ. ಇದರ ಬೆಲೆ ₹1.20 ಲಕ್ಷ ಇದೆ ಎಂದು ರೈತ ಅಜರೋದ್ದಿನ್ ಹೇಳುತ್ತಾರೆ.
ʼಈ ತಳಿಯ ಮೇಕೆಯನ್ನು ಹೈದರಾಬಾದ್, ಮುಂಬಯಿ ಕಡೆ ಹೆಚ್ಚಿನ ಜನ ಇಷ್ಟಪಡುತ್ತಾರೆ. ಇದರ ತೂಕಗಿಂತ ಇದರ ರೂಪವೇ ಬಹಳಷ್ಟು ಜನರನ್ನು ಆಕರ್ಷಿಸುತ್ತಿದೆ. ಈ ಹಿಂದೆ ಬೀದರ್ ಉತ್ಸವ ಸಂದರ್ಭದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು’ ಎಂದರು.
‘ಕಳೆದ ಬಕ್ರಿದ್ ವೇಳೆ ಬೀದರ್‌ನಲ್ಲಿ 90 ಸಾವಿರಕ್ಕೆ ಕೇಳಿದ್ರು, ಕೊಡಲಿಲ್ಲ. ಮುಂದಿನ ಬಕ್ರಿದ್‌ಗೆ ಮಾರಾಟ ಮಾಡಲಾಗುವುದುʼ ಎಂದು ತಿಳಿಸಿದ್ದಾರೆ.
ಕಣ್ಮನ ಸೆಳೆದ ಪುಂಗನೂರ್ ಹಸು :
ಹಸುಗಳಲ್ಲಿಯೇ ಅತಿ ಚಿಕ್ಕ ಹಸು ಎಂದೇ ಖ್ಯಾತಿ ಹೊಂದಿರುವ ಪುಂಗನೂರ್ ತಳಿಯ ಹಸು ಮೇಳದಲ್ಲಿ ಕಣ್ಮನ ಸೆಳೆಯುತ್ತಿದೆ.
ಹುಮನಾಬಾದ್ ತಾಲ್ಲೂಕಿನ ರೈತ ಬ್ರಹ್ಮಶ್ರೀ ಗಂಗಾಧರ ಸ್ವಾಮೀಜಿ ಅವರು ಪ್ರದರ್ಶನ್ಕೆ ತಂದಿರುವ ಪುಂಗನೂರ್ ತಳಿಯ ಮೂರು ಬಿಳಿ ಬಣ್ಣದ ಹಸುಗಳು ನೋಡುಗರ ಗಮನ ಸೆಳೆಯುತ್ತಿವೆ.

ಗಾತ್ರದಲ್ಲಿ 2 ರಿಂದ 3 ಅಡಿ ಮಾತ್ರ ಎತ್ತರ, ಚಿಕ್ಕ ಕೊಂಬು, ಅಗಲ ಹಣೆ ಇರುವ ಈ ಹಸು ನೋಡಲು ಮುದ್ದಾಗಿ ಕಾಣುತ್ತದೆ. ಎರಡು ಲೀಟರ್ ಹಾಲು ನೀಡುವ ಈ ಹಸುವಿನ ಬೆಲೆ ₹3 ರಿಂದ 4 ಲಕ್ಷ ಎಂದು ರೈತ ಗಂಗಾಧರ ತಿಳಿಸಿದ್ದಾರೆ.
ಹೂವಿನಲ್ಲಿ ಅರಳಿದ ಗೌತಮ ಬುದ್ಧ :
ಮೇಳದಲ್ಲಿ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ. ಹೂವುಗಳಿಂದ ಅಲಂಕೃತವಾದ 12 ಅಡಿ ಎತ್ತರದ ಗೌತಮ ಬುದ್ಧನ ಮೂರ್ತಿ ಆಕರ್ಷಿಸುತ್ತಿದೆ. ಬುದ್ಧನ ಮೂರ್ತಿ ಎದುರು ಗುಲಾಬಿ ಹೂವುಗಳಿಂದ ಸಿದ್ಧಪಡಿಸಿ ಹೃದಯ ಆಕಾರದಲ್ಲಿ ನಿಲ್ಲಿಸಿರುವ ಸೆಲ್ಫಿ ಪಾಯಿಂಟ್ ಜನರು ಪೋಟೊ ತೆಗೆದುಕೊಳ್ಳಲು ನಾ ಮುಂದು ತಾ ಮುಂದು ಎನ್ನುತ್ತಿದ್ದಾರೆ.


ವಿವಿಧ ವಿಜ್ಞಾನಿಗಳ ಸಂಶೋಧನೆಗಳ ಪ್ರಾತ್ಯಕ್ಷಿಕೆ, ಪ್ರಾತಿನಿಧಿಕ ಮೇಳಗಳು, ಮತ್ತು ಕೃಷಿಕರಿಗೆ ತಾಂತ್ರಿಕ ಸಹಾಯ ನೀಡುವ ಉದ್ದೇಶದಿಂದ ಏರ್ಪಡಿಸಿದ್ದ ವಿಶೇಷ ಚಟುವಟಿಕೆಗಳು ಗಮನ ಸೆಳೆದವು.
ಈ ಸುದ್ದಿ ಓದಿದ್ದೀರಾ? ಬೀದರ್ | ಎಟಿಎಂ ದರೋಡೆ ಪ್ರಕರಣ : ಆರೋಪಿಗಳ ಬಂಧನಕ್ಕೆ 8 ಪೊಲೀಸ್ ತಂಡ ರಚನೆ
ವಿವಿಧ ತಳಿಯ ಕೋಳಿಗಳ ಪ್ರದರ್ಶನ :


ಮೇಳದ ಅಂಗವಾಗಿ ವಿವಿಧ ದೇಶಿ ತಳಿಯ ಜಾನುವಾರು ಕುಕ್ಕುಟ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ದೇವಣಿ, ಮುರ್ರಾ, ಕಿಲಾರಿ ಹಾಗೂ ಟರ್ಕಿ, ನಾಟಿಕೋಳಿ, ಗಿರಿರಾಜ, ಫ್ಯಾನ್ಸಿ ಸೇರಿದಂತೆ ವಿವಿಧ ತಳಿಯ ಜಾನುವಾರು ಪ್ರದರ್ಶನ ಗಮನ ಸೆಳೆಯುತ್ತಿದ್ದು, ಪ್ರತಿಯೊಂದು ಜಾನುವಾರು, ಕೋಳಿ ತಳಿಗಳ ಕೆಳಗೆ ವಿವರದ ಫಲಕ ಹಾಗೂ ಸಾಕಾಣಿಕೆ ಮಾಡುವ ರೈತರ ವಿವರ ಹಾಕಲಾಗಿದೆ. ವೀಕ್ಷಣೆ ಬಂದ ಜನರನ್ನು ರೈತರು ತಳಿಯ ಕುರಿತು ಮಾಹಿತಿ ವಿಶ್ಲೇಷಿಸುತ್ತಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




