ನಿವೃತ್ತ ಶಿಕ್ಷಕರ ಪಿಂಚಣಿ ಹಣವನ್ನು ಮಂಜೂರು ಮಾಡಲು 50 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಶಿಕ್ಷಣ ಇಲಾಖೆಯ ನೌಕರರೊಬ್ಬರು ಶನಿವಾರ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿ ಹನಮಂತ ರಾಠೋಡ್ ಅವರ ಕಚೇರಿ ಮೇಲೆ ಶನಿವಾರ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಇಒ ಪರವಾಗಿ 50 ಸಾವಿರ ರೂ. ಲಂಚದ ಹಣ ಪಡೆಯುತ್ತಿದ್ದ ಕಾಳಗಿ ತಾಲೂಕಿನ ಶಿಕ್ಷಕ ರಾಧಾಕೃಷ್ಣ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು.
ನಿವೃತ್ತ ಶಿಕ್ಷಕಿಯೊಬ್ಬರ ಪಿಂಚಣಿಗೆ ಸಂಬಂಧಿಸಿದ ಕಡತಗಳಿಗೆ ಸಹಿ ಮಾಡಲು ಬಿಇಒ ಹನಮಂತ ರಾಠೋಡ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಶಿಕ್ಷಕಿಯ ಪತಿ ಯಶವಂತರಾಯ ಜಮಾದಾರ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದರು. ಲೋಕಾಯುಕ್ತ ಡಿವೈಎಸ್ಪಿ ಗೀತಾ ಬೇನಹಾಳ ಹಾಗೂ ಪಿಐ ರಾಜಶೇಖರ ಹಳಿಗೋಧಿ ನೇತ್ರತ್ವದಲ್ಲಿ ದಾಳಿ ನಡೆಸಲಾಯಿತು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ದೇವರ ದರ್ಶನ ಮುಗಿಸಿ ವಾಪಸ್ ಬರುವಾಗ ಭೀಕರ ಅಪಘಾತ; ನಾಲ್ವರು ಸಾವು
ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ರಾಧಾಕೃಷ್ಣನನ್ನು ಬಂಧಿಸಲಾಗಿದೆ. ಘಟನೆಯ ಮಾಹಿತಿ ತಿಳಿದ ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತ ರಾಠೋಡ್ ಪರಾರಿಯಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





