ಹಸಿವು ನೀಗಿಸಿಕೊಳ್ಳಲು ಅನ್ನ ಸಿಗದಾಗ ಮಾದಯ್ಯ ಬದುಕುವುದೇ ಹುಲಿಯ ಹಾಲು ಕುಡಿದು. ಹುಲಿಯ ಈ ಪ್ರತಿಮೆ ಮಾದಯ್ಯ ಗಳಿಸಿದ ಅರಿವನ್ನು, ಧರಿಸಿದ ಧೀರತ್ವವನ್ನು, ಕ್ರೌರ್ಯದ ಮೇಲಿನ ವಿಜಯವನ್ನು ಸಂಕೇತಿಸುತ್ತದೆ.
ಚಾಮರಾಜನಗರ ಜನಪದ ತವರು. ತನ್ನದೇ ವಿಶಿಷ್ಟ ಸಾಂಸ್ಕೃತಿಕ ನೆಲೆಯನ್ನು ಕಂಡಿದೆ. ಅಲ್ಲದೆ ಜಿಲ್ಲೆಯಲ್ಲಿ ಬಗೆ ಬಗೆಯ ಕಲಾವಿದರನ್ನೂ ಕೂಡ ಕಾಣಬಹುದು. ಕಲೆಗೆ ಬೆಸುಗೆಯಾಗಿರುವ ಕೊಂಡಿಗಳು, ಒಂದೊಂದು ಕ್ಷೇತ್ರದಲ್ಲಿ ವಿಶಿಷ್ಟಾನುಭವ ಹೊಂದಿವೆ. ಕಲಾ ಪ್ರಕಾರಗಳು ಒಂದಕ್ಕೊಂದು ಮಿಗಿಲಾದವು. ನೆಲಮೂಲ ವಾಸಿಗಳಲ್ಲಿ ಕಥಾ ಹಂದರ ಹಾಸುಹೊಕ್ಕಾಗಿದೆ. ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆಯೆಂದರೂ ತಪ್ಪಾಗಲಾರದು. ಮಲೆ ಮಹದೇಶ್ವರರ ಆದಿಯಾಗಿ ಸಿದ್ದಪ್ಪಾಜಿ, ಮಂಟೇಲಿಂಗಯ್ಯ, ರಾಚಪ್ಪಾಜಿ, ಚೆನ್ನಾಜಮ್ಮಾಜೀಯಂತಹ ಸಾಂಸ್ಕೃತಿಕ ರಾಯಭಾರಿಗಳ ತವರೂರು. ಇಂದಿನ ತಲೆಮಾರಿಗೆ ವರನಟ ಡಾ. ರಾಜ್ ಕುಮಾರ್ ಕೊಡುಗೆಯಾಗಿದ್ದಾರೆ. ಇಂತಹ ನೆಲದಲ್ಲಿ ಶೋಷಿತ ಸಮುದಾಯಗಳಲಿ ವ್ಯಕ್ತಿಯಾಗಿರದೆ, ಸ್ವಾಭಿಮಾನದ ಸಂಕೇತವಾದವರು ‘ಮಾದಾರಿ ಮಾದಯ್ಯ(ಮಲೆ ಮಹದೇಶ್ವರ)’.
77 ಮಲೆಗಳ ಪ್ರಾಂತ್ಯಗಳಲಿ ಇಂದಿಗೂ ಸ್ತುತಿಸಲಾಗುವ, ಸ್ಮರಿಸಲಾಗುವ, ದೈವವಾಗಿರುವ ಹೆಸರೇ ಮಲೆ ಮಹದೇಶ್ವರರ. ‘ಕಾಯಕವೇ ಕೈಲಾಸ’ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಶೋಷಿತ ಸಮುದಾಯದ ಶ್ರೀಮಂತಿಕೆಯ ಕಲೆ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಮಲೆ ಮಹದೇಶ್ವರರೇ ತಮ್ಮ ಸಾಗುವ ಹಾದಿಯುದ್ಧಕ್ಕೂ ಸಾಮಾಜಿಕ ನೆಲೆಗಟ್ಟಿನಲ್ಲಿ ನಡೆಸಿದ ಹೋರಾಟದ ದಾಖಲೆಗಳಿವು. ಕೇವಲ ದೈವತ್ವವಷ್ಟೇ ಅಲ್ಲದೇ, ಮನುಷ್ಯತ್ವ ಪ್ರತಿಪಾದಿಸಿದ ವ್ಯಕ್ತಿ. ಶೋಷಣೆಯ ದೌರ್ಜನ್ಯ ತುತ್ತತುದಿಯನ್ನೇರಿ ಕೇಕೆ ಹಾಕುವ ಸಂದರ್ಭದಲ್ಲಿ, ತಮ್ಮ ಸಮುದಾಯಕ್ಕಾಗಿ ಶೋಷಿತ ವರ್ಗದವರಿಗಾಗಿ ಅಂದು ಧ್ವನಿಯಾದ ಸಂತ.

ಜನಪದ ಹಿನ್ನಲೆಯಲ್ಲಿ ನೋಡುವುದಾದರೆ, ಮಲೆ ಮಹದೇಶ್ವರ ಮಾದಾರಿ ಮಾದಯ್ಯ. ಶ್ರಮಜೀವಿಯ ಕಾಯಕ ಭೇದ ಭಾವ ಇರಿಸದೆ ಸಮ ಸಮಾಜದ ಸಾಂಗತ್ಯ ಹೊಸಿದಿತ್ತು ಎಂದು ಜನಪದ ಹೇಳುತ್ತದೆ. ಚಮ್ಮಾರನ ಬಳಿಗೆ ಮಲೆ ಮಹದೇಶ್ವರರೇ ಬರುತಿದ್ದರು ಎನ್ನುವ ಗಾಢವಾದ ಭಕ್ತಿ ಇಲ್ಲಿನ ಜನರದ್ದು. ‘ಹುಟ್ಟಿನಿಂದ ಯಾರೂ ದೊಡ್ಡವರು ಅಲ್ಲ, ಇಲ್ಯಾರು ಚಿಕ್ಕವರು ಅಲ್ಲ’. ವ್ಯಕ್ತಿಯನ್ನು ಶ್ರಮ, ಗುಣದಿಂದ ಅಳಿಯಬೇಕೆ ಹೊರತು ತಾನು ಮಾಡುವ ಕಾಯಕದಿಂದಲ್ಲ. ಮಾದಾರಿ ಮಾದಯ್ಯ ಅಸ್ಪೃಶ್ಯತೆ-ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ ಸಾಂಸ್ಕೃತಿಕ ರಾಯಭಾರಿಯೂ ಹೌದು.
ಈಗಲೂ ಚಾಮರಾಜನಗರ ಭಾಗದಲ್ಲಿ ಹಬ್ಬ ಹರಿದಿನ, ಜಾತ್ರೆ ಸಂದರ್ಭಗಳಲ್ಲಿ ಮಾದಾರಿ ಮಾದಯ್ಯ(ಮಲೆ ಮಹದೇಶ್ವರ)ರ ಪದಗಳನ್ನು ಹಾಡುವುದುಂಟು. ಮಲೆ ಮಹದೇಶ್ವರನಿರದ ಸ್ಮೃತಿ ಇಲ್ಲವೇ ಇಲ್ಲ, ಈ ನೆಲದಲ್ಲಿ. ಇದು ಕಲೆಯಷ್ಟೇ ಅಲ್ಲ, ಸಮುದಾಯದ ಅಸ್ಮಿತೆ. ಕಾಯಕ ಯೋಗಿ ಸಮಾನತೆ ಪ್ರತಿಪಾದಿಸುತ್ತ, ಕಥಾ ಹಂದರಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ.

ಹಿರಿಯ ಸಾಹಿತಿ ಮಹದೇವ ಶಂಕನಪುರ ಈ ದಿನ.ಕಾಮ್ ಜತೆಗೆ ಮಾತನಾಡಿ, “ಎಚ್ ಎಸ್ ಶಿವಪ್ರಕಾಶ್ ಅವರ ನಾಟಕ ‘ಮಾದಾರಿ ಮಾದಯ್ಯ’ ಕಳೆದ 35 ವರ್ಷಗಳಿಂದಲೂ ಕನ್ನಡ ನೆಲದಲ್ಲಿ ಅಭಿನಯಿಸಲ್ಪಡುತ್ತಿದೆ. ಮೊದಲಿಗೆ 1990ರಲ್ಲಿ ಇದರ ರಂಗ ಪ್ರಯೋಗವಾಯಿತು. ಇದರ ವಸ್ತು ಮತ್ತು ಆಶಯಗಳಂತು ಇಂದಿಗೂ ಪ್ರಸ್ತುತವೇ. ಇತ್ತೀಚೆಗೆ(30-11-2025) ಈ ನಾಟಕ ಚಾಮರಾಜನಗರದಲ್ಲಿ ಪ್ರದರ್ಶನಗೊಂಡಿತು. ಮಲೆ ಮಾದೇಶ್ವರ ಜನಪದ ಕಾವ್ಯದ ಪ್ರಸಂಗ ಮತ್ತು ಪಾತ್ರಗಳನ್ನು ಶಿವಪ್ರಕಾಶರು ವರ್ತಮಾನದ ಸವಾಲುಗಳಿಗೆ ತಕ್ಕಂತೆ ಮುರಿದು ಕಟ್ಟಿದ್ದಾರೆ. ಇಂದಿಗೂ ಪ್ರಸ್ತುತವಾಗುವ ಹಾಗೆ ಸೃಜನಶೀಲವಾಗಿ ಮರು ಸೃಷ್ಠಿಸಿದ್ದಾರೆ” ಎಂದು ಹೇಳಿದರು.
ಚಾಮರಾಜನಗರದ ಯುವ ರಂಗಕರ್ಮಿ ಕಿರಣ್ ಗಿರ್ಗಿಯವರ ಸಂಗೀತ ಮತ್ತು ರಂಗ ನಿರ್ದೇಶನದಲ್ಲಿ ಅಭ್ಯಾಸಿ ಟ್ರಸ್ಟ್ ಕಲಾವಿದರ ತಂಡ ಮಾದಾರಿ ಮಾದಯ್ಯನನ್ನು ರಂಗದ ಮೇಲೆ ಅಭಿನಯಿಸಿದರು. ಬೆಳಕು ಮತ್ತು ಪ್ರಸಾಧನ ಮಂಜುನಾಥ್ ಕಾಚಕ್ಕಿ, ರಂಗನಾಥ್ ವಸ್ತ್ರಾಲಂಕಾರ, ಮಧುಸೂದನ್ ಹೊಸೂರು ರಂಗಸಜ್ಜಿಕೆ, ಪರಿಕರ ಒದಗಿಸಿದ್ದರು. ಪಾತ್ರ ಪೋಷಣೆ ಮಾಡಿದ್ದ ನಟ-ನಟಿಯರು ಬಹುತೇಕ ಸ್ಥಳೀಯರಾಗಿದ್ದರು. ನಿರ್ದೇಶಕ ಮತ್ತು ನಟರ ಒಗ್ಗೂಡುವಿಕೆಯ ಪ್ರಯತ್ನ ಹಾಗೂ ಚರ್ಚೆಗಳಿಂದ ಈ ನಾಟಕ ಆಗುತ್ತದೆ ಎಂಬ ಶಿವಪ್ರಕಾಶರ ಮಾತನ್ನು ಈ ಪ್ರಯೋಗದ ನಿರ್ದೇಶಕ ಮತ್ತು ನಟರು ರಂಗದ ಮೇಲೆ ಆಗುವಂತೆ ಮಾಡಿದಂತಿದೆ” ಎಂದು ತಿಳಿಸಿದರು.
ಮಲೆ ಮಾದೇಶ್ವರ ವನ್ಯಜೀವಿಧಾಮದಲ್ಲಿ ಮನುಷ್ಯ, ತಾಯಿ ಮತ್ತು ಮರಿ ಹುಲಿಗಳಿಗೆ ವಿಷಹಾಕಿ ಕೊಂದ ಘಟನೆ ಇನ್ನೂ ಮಾಸಿಲ್ಲ. ಇಂತಹ ಪ್ರಾಣಿಗಳ ಹತ್ಯೆ, ಮನುಷ್ಯ ವನ್ಯಜೀವಿಗಳ ಸಂಘರ್ಷ, ಕಾಡು ಬೆಟ್ಟಗುಡ್ಡಗಳ ಮೇಲಿನ ದಾಳಿ ಗಣಿಗಾರಿಕೆ, ಲೂಟಿಗಳಿಂದ ಎಪ್ಪತ್ತೇಳು ಮಲೆ ಪ್ರದೇಶ ಮಾತ್ರವಲ್ಲ, ಇಡೀ ನಾಡೇ ಇಂತಹ ಕೃತ್ಯಗಳಿಂದ ನಲುಗುತ್ತಿದೆ. ಇಂತಹ ಆಘಾತಕಾರಿ ಪರಿಸ್ಥಿತಿಗಳಿಗೆ ಪರಿಹಾರವೇನು? ಈ ಪ್ರಶ್ನೆಗಳೊಂದಿಗೆ ಏಳು ಜನ ಗುಡ್ಡಪ್ಪನವರು ‘ಕಳೆದುಕೊಂಡಿರುವ ದಾರಿ ಹುಡುಕುವ’ ಮಾತುಗಳ ಮೂಲಕ ನಾಟಕ ಆರಂಭಿಸುವುದು ಮಹತ್ವದ ಸಂದೇಶವಾಗಿದೆ. ನಾವು ವಾಸಿಸುವ ಭೂತಾಯಿಗೆ ನಮ್ಮಿಂದಲೇ ದೊಡ್ಡ ಗಂಡಾಂತರ ಒದಗಿದೆ. ಸೂರ್ಯ, ಚಂದ್ರ, ದೇವಾನುದೇವತೆಗಳನ್ನು ಸೆರೆಯಲ್ಲಿಟ್ಟು ನೆಲತಾಯಿಯನ್ನು ವಶಪಡಿಸಿಕೊಂಡು ವರಿಸುವ ನಾಟಕದ ಶ್ರವಣದೊರೆ ನಮ್ಮ ನಡುವೆಯೇ ಇದ್ದಾನೆ ಎನಿಸುವಂತೆ ನಾಟಕ ವರ್ತಮಾನಕ್ಕೆ ಕನ್ನಡಿ ಹಿಡಿಯುತ್ತದೆ.

ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆಯನ್ನು ಹತ್ತಿಕ್ಕಿ, ಪ್ರಜಾಪ್ರಭುತ್ವದೊಳಗಿನ ಪುರುಷೋತ್ತಮನೆಂಬ ಸರ್ವಾಧಿಕಾರಿಯನ್ನು ಶ್ರವಣದೊರೆ ಪ್ರತಿನಿಧಿಸುತ್ತಾನೆ. ಇವನ ಸಂಹಾರಕ್ಕೆ ಮಾದಾರಿ ಮಾದಯ್ಯ ರೂಪಿಸುವ ರಣತಂತ್ರ ಹರಳಯ್ಯನ ಉರಿಚಮ್ಮಾವುಗೆಯ ಅಸ್ತ್ರ. ಅಸ್ಪೃಶ್ಯ ಅಸ್ಮಿತೆ ಮತ್ತು ಅಪಮಾನಗಳ – ರಕ್ತ ಮತ್ತು ಬೆವರಿನ ಪ್ರತೀಕ ಉರಿ ಚಮ್ಮಾವುಗೆ. ಶ್ರವಣನನ್ನು ಇನ್ನಿಲ್ಲದಂತೆ ಸುಟ್ಟು ಹಾಕುವ ಈ ಅಸ್ತ್ರ ಬಾಬಾ ಸಾಹೇಬರ ಸಂವಿಧಾನದ ಶಕ್ತಿಯ ಪ್ರತೀಕವಾಗಿ ಭಾಸವಾಗುತ್ತದೆ. ಈ ನಾಟಕದಲ್ಲಿನ ಬಸವಣ್ಣ ಪ್ರಜಾಪ್ರಭುತ್ವ ಮೌಲ್ಯಗಳ ಮರುಸ್ಥಾಪನೆ ಮತ್ತು ಬಿಡುಗಡೆಯ ಸಂಕೇತ. ನನ್ನ ಮೇಲೆ ನಿರಂತರ ಅತ್ಯಾಚಾರವಾಗಿದೆ, ನನ್ನನ್ನು ಕಲ್ಲು ಮೂರ್ತಿ ಮಾಡಿ ನನ್ನ ಮಾತನ್ನು, ಜೀವವನ್ನು, ಆತ್ಮವನ್ನು ಕಿತ್ತುಕೊಂಡಿದ್ದಾರೆಂಬ ಬಸವಣ್ಣನ ಮಾತು ಇಂದಿನ ಬುದ್ಧ, ಬಸವ, ಅಂಬೇಡ್ಕರರ ಪ್ರತಿಮೆಗಳ ಸ್ಥಿತಿಯನ್ನು ಒಳಗೊಂಡು ಮೂರ್ತಿ ಪೂಜೆ, ದೇವರು-ಧರ್ಮಗಳ ದುರುಪಯೋಗಗಳನ್ನು ಪ್ರಶ್ನಿಸುವ, ಮರು ಅವಲೋಕಿಸಿಕೊಳ್ಳುವಂತಿದೆ.
ಬಸವಣ್ಣನ ಮಾತುಗಳು ಇಂದಿನ ಸ್ಥಾವರ ಸಂಸ್ಕೃತಿಯ ವಿಡಂಬನೆಯಂತೆ ಕೇಳಿಸುತ್ತದೆ. ಬಸವಣ್ಣನ ವಾರಸುದಾರಿಕೆಗಾಗಿ ಕತ್ತಿವೀರರು, ಕಠಾರಿವೀರರು ಮಾಡುವ ಕಿತ್ತಾಟ ಇಂದಿನ ಬಸವ ಅನುಯಾಯಿಗಳನ್ನು, ಹಿಂದೂ ಮುಸ್ಲಿಂ ಮತೀಯ ವಾದಿಗಳನ್ನು ಅಣಕಿಸುವಂತಿದೆ. ತನ್ನ ತಲೆಯ ಮೇಲೆ ಹೊತ್ತ ಬಟ್ಟೆಯ ಹೊರೆಯನ್ನು ಇಳಿಸಿಕೊಳ್ಳಲಾಗದೇ, ಅದರಲ್ಲಿರುವ ಜೀವರಾಶಿಗಳಿಗೆ ಹಿಂಸೆಯಾಗದಂತೆ ಮಡಿ ಮಾಡಲಾಗದೇ ಪರಿತಪಿಸುವ ಮಡಿವಾಳ ಮಾಚಿದೇವ ಇಂದಿನ ಪ್ರಾಮಾಣಿಕ ಮನುಷ್ಯರನ್ನು ಪ್ರತಿನಿಧಿಸುತ್ತಾನೆ. ಹಾಗೆ, ಅನಗತ್ಯವಾದ ಮನುಷ್ಯ ವಿರೋಧಿ ಭಾರದ ಮೂಟೆಗಳನ್ನು ಇಳಿಸಬೇಕಾಗಿರುವುದನ್ನೂ ಈತ ಸೂಚಿಸುತ್ತಿದ್ದಾನೆ.
ಮಾದಯ್ಯ ವಾಹನ ಮಾಡಿಕೊಂಡಿರುವ ಹುಲಿಯನ್ನು ನಾಟಕದ ಕರ್ತೃ ಇಲ್ಲಿ ವಿಶಿಷ್ಟವಾಗಿ ಚಿತ್ರಿಸಿದ್ದಾರೆ. ಜೋಳಿಗೆ ಒಳಗಿನ ‘ಬೆಕ್ಕು’ ಬಡವರು ಬಗಲಲಿ ಕಟ್ಟಿಕೊಂಡಿರುವ ಹಸಿವಾಗಿದೆ. ಅದು ಸಾಮಾನ್ಯ ಹಸಿವಲ್ಲ. ಹೆಬ್ಬುಲಿಯಂತಹ ಹಸಿವು. ಅಂತಹ ಹೆಬ್ಬುಲಿ ರೂಪದ ಹಸಿವನ್ನು ಮಾದಯ್ಯ ಬೆಕ್ಕಿನ ರೂಪದಲ್ಲಿ ಸಾಕಿಕೊಂಡು ಸಹ ಜೀವನ ನಡೆಸುತ್ತಿರುವುದು ಬಡವರ, ಹಸಿದವರ ಗೆಲುವಿನ ಸಂಕೇತ. ಇದೇ ಹಸಿವು ನೀಗಿಸಿಕೊಳ್ಳಲು ಅನ್ನ ಸಿಗದಾಗ ಮಾದಯ್ಯ ಬದುಕುವುದೇ ಹುಲಿಯ ಹಾಲು ಕುಡಿದು. ಹುಲಿಯ ಈ ಪ್ರತಿಮೆ ಮಾದಯ್ಯ ಗಳಿಸಿದ ಅರಿವನ್ನು, ಧರಿಸಿದ ಧೀರತ್ವವನ್ನು, ಕ್ರೌರ್ಯದ ಮೇಲಿನ ವಿಜಯವನ್ನು ಸಂಕೇತಿಸುತ್ತದೆ.

ವಿಷವಿಕ್ಕಿ ಹುಲಿಗಳನ್ನು ಕೊಲ್ಲುವವರ ಮುಂದೆ ಹುಲಿಯ ಹಾಲುಂಡು, ಹುಲಿಯಾಗಿ ಹುಲಿಗಿಂತಲೂ ಕ್ರೂರಿಯಾದ ಮನುಷ್ಯನನ್ನು ಮೆಟ್ಟಿನಿಲ್ಲುವ ಮಾದಯ್ಯನೇ ಮಾದರಿಯಾಗಿ ನಿಲ್ಲುತ್ತಾನೆ. ಕಿರಣ್ ಗಿರ್ಗಿ ಇಲ್ಲಿ ಸಂಗೀತ ನೀಡಿ, ನಿರ್ದೇಶನ ಮಾಡಿ ಮಾದಾರಿ ಮಾದಯ್ಯ ಪಾತ್ರಧಾರಿಯಾಗಿ ನಾಟಕವನ್ನು ದಡ ಮುಟ್ಟಿಸುವಲ್ಲಿ ನಿರ್ಣಾಯಕವಾಗಿ ಕಂಡರು. ಏಳುಮಲೆಗಳೇ ಏಳು ಜನ ಗುಡ್ಡರಾಗಿ ಆಡುವ ಮಾತು ಇಡೀ ಒಕ್ಕಲುಗಳ ಧ್ವನಿಯಾಗಿ ಕೇಳುತ್ತದೆ. ಮೋಚಿಮಲೆ ಯಕ್ಕಡ ಹೊಲೆಯುವ ಮೋಚಿಯಾಗಿ, ಅವನೇ, ಮಾದಾರಿ ಮಾದಯ್ಯನೂ ಆಗಿ ಪರಿವರ್ತನೆಗೊಳ್ಳುವುದು ದಲಿತ ಅಸ್ಮಿತೆಯ ಜಾಗೃತ ಪ್ರಜ್ಞೆಯ ಪ್ರತೀಕ.
ಶ್ರವಣನ ಸಂಹಾರಕ್ಕೆ ಮಾಯ ಜಾಲದ ಬಲೆ ಬೀಸುವ ಜೀತದಾಳಾಗಿ, ಮಠಾಧಿಪತಿಗೆ ಪವಾಡಪುರುಷನಾಗಿ, ಕಲ್ಲುಮೂರ್ತಿ ಬಸವಣ್ಣನಿಗೆ ಮಾತು ಕೊಟ್ಟವನಾಗಿ, ಸರ್ವಾಧಿಕಾರಿ ಶ್ರವಣ ಸಂಹಾರಕನಾಗಿ ಮಾದಯ್ಯನ ಪಾತ್ರದಲ್ಲಿ ಕಿರಣ್ ಗಿರ್ಗಿ ನಾಟಕವನ್ನು ಆವರಿಸಿಕೊಳ್ಳುತ್ತಾರೆ. ಶ್ರವಣ, ನೆಲತಾಯಿ, ಶನಿ ಮಹಾತ್ಮ, ವಿನಾಯಕ, ದಂಡನಾಯಕ ಪಾತ್ರಧಾರಿಗಳು ತಮ್ಮ ಗಡಸು ಏರುಧ್ವನಿ ಸಂಭಾಷಣೆಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಶ್ರವಣ ಪಾತ್ರಧಾರಿ ಕಲೆ ನಟರಾಜು ಪಕ್ಕಾ ಗ್ರಾಮೀಣ ರಂಗ ಕಲಾವಿದರ ಮಾದರಿಯಲ್ಲಿ ಕಂಗೊಳಿಸಿದರು. ಸೂರ್ಯ ಚಂದ್ರ ನೆಲತಾಯಿ ಮೇಲಿನ ದಿಗ್ವಿಜಯದಿಂದಿಡಿದು ಉರಿ ಚಮ್ಮಾವುಗೆ ಉರಿಗೆ ಉರಿದು ಹೋಗುವ ಶ್ರವಣನ ಅಭಿನಯ ಆಕರ್ಷಕವಾಗಿ ಮೂಡಿ ಬಂತು. ನೆಲತಾಯಿ ಮತ್ತು ಕಲ್ಯಾಣಮ್ಮ ಆಗಿ ನಟಿಸಿದ ನಂದಿನಿ ರವಿಕುಮಾರ್, ಹರಳಯ್ಯನಾಗಿದ್ದ ಮಹೇಶಪ್ಪ ಕಟ್ನವಾಡಿ ತಮ್ಮ ಪಾತ್ರಗಳಿಗೆ ಜೀವ ತುಂಬಿ ನಟಿಸಿದರು. ಮಠಾಧಿಪತಿ ಮತ್ತು ಬಸವಣ್ಣನ ಪಾತ್ರಗಳು ತಮ್ಮ ಸಂಭಾಷಣೆಗಳ ಮೂಲಕ ನಾಟಕದ ಸಂದೇಶಗಳನ್ನು ನೋಡುಗರಿಗೆ ದಾಟಿಸಿದರು.
ಏಳು ಜನ ಗುಡ್ಡರು ಇಡೀ ನಾಟಕದ ಸೂತ್ರಧಾರರು. ಶಾಂತರಾಜು ಮೊದಲ ಗುಡ್ಡನಾಗಿ ಉಳಿದ ಆರು ಜನರನ್ನು ಹುರಿದುಂಬಿಸುತ್ತ, ಪ್ರೇಕ್ಷಕರನ್ನು ತಲುಪುತ್ತ ಸೆಳೆಯುತ್ತಿದ್ದರು. ವೃತ್ತಿ ಗಾಯಕರ ಹಾಡುಗಾರಿಕೆಯ ಪರಿಣಿತಿ, ರಂಗನಟನ ಸೂಕ್ಷ್ಮಗಳು ಗುಡ್ಡರಿಗೆ ಇದ್ದರೆ ಇನ್ನೂ ಚೆನ್ನಾಗಿರುತ್ತದೆ. ಈ ನಾಟಕದ ಮುಖ್ಯ ಭಾಗಗಳಲ್ಲಿ ಒಂದಾದ ಸಂಕಮ್ಮನ ಪ್ರಸಂಗ ಬಿಟ್ಟಿದ್ದು ಈ ಪ್ರಯೋಗದಲ್ಲಿ ಎದ್ದು ಕಾಣಿಸಿದ ಲೋಪವಾಗಿಬಿಟ್ಟಿತು. ಸಿದ್ಧ ವೇದಿಕೆಯಲ್ಲಿ ರಂಗ ಸಜ್ಜಿಕೆ ಮತ್ತು ಪರಿಕರಗಳು ಆಕರ್ಷಕವಾಗಿದ್ದವು. ರಾಗಿ ಬೀಸುವ ಮಾರಮ್ಮಗಳ ಮುಖವಾಡಗಳು, ಪ್ರಾಣಿಯಾಗುವ ಮಠಾಧೀಶ, ಕೊಂಡ ಮಾವಿನಮರದ ಹರಳಯ್ಯನ ಮಠ, ಬಸವಣ್ಣನ ಗುಡಿ, ಮಾದಯ್ಯನ ನಾಗದಂಡ ಕ್ರಿಯೇಟಿವ್ ಆಗಿದ್ದು, ನಾಟಕ ಪರಿಣಾಮಕಾರಿಯಾಗಲು ಇದು ಒಳ್ಳೆಯ ಕೊಡುಗೆಯಾಗಿತ್ತು.
ವಸ್ತ್ರಾಲಂಕಾರ ಪಾರಂಪರಿಕ ಮತ್ತು ಐತಿಹಾಸಿಕ ಚಹರೆಗಳನ್ನು ಚೆಲ್ಲುತ್ತಿದ್ದವು. ಬಣ್ಣ ಬಣ್ಣದ ಬೆಳಕು ಚಿತ್ತಾಕರ್ಷಕ ಎನಿಸಿತ್ತಾದರೂ ಆಗಾಗ ಕೆಲವೊಮ್ಮೆ ಅನಪೇಕ್ಷಿತ ಬೆಳಕು ಸಂಯೋಜನೆಯನ್ನು ನಿಯಂತ್ರಿಸುವ ಕಡೆ ಗಮನ ಕೊಡಬೇಕಿತ್ತು. ಚಂಡೆ, ತಮಟೆ, ತಬಲ, ದಮ್ಮಡಿ, ಕಂಸಾಳೆ, ಹಾರ್ಮೋನಿಯಂನಂತಹ ಸರಳ ಸಂಗೀತ ಪರಿಕರಗಳ ಪರಿಣಾಮಕಾರಿ ಬಳಕೆಯ ಸಂಗೀತ ಗಮನ ಸೆಳೆಯಿತು. ನಿರ್ದೇಶಕರು ತಮ್ಮ ಮಿತಿಯೊಳಗೆ ಒಳ್ಳೆಯ ಪ್ರದರ್ಶನ ನೀಡಲು ಶ್ರಮಿಸಿದ್ದು ಕಾಣುತ್ತಿತ್ತು. ಹಲವು ಸವಾಲುಗಳ ನಡುವೆ ಲಭ್ಯವಿರುವ ಸವಲತ್ತುಗಳನ್ನು ಬಳಸಿಕೊಂಡು ನಿರ್ದೇಶಕರು ಮತ್ತು ತಂಡ ನಾಟಕವನ್ನು ರಂಗ ಪ್ರಯೋಗವಾಗಿಸುವಲ್ಲಿ ಯಶಸ್ವಿ ಪ್ರಯತ್ನ ಮಾಡಿದ್ದಾರೆ.

ರಂಗ ನಿರ್ದೇಶಕ ಕಿರಣ್ ಗಿರ್ಗಿ ಮಾತನಾಡಿ, “ಮಲೆ ಮಹದೇಶ್ವರ, ಮಂಟೇಲಿಂಗಯ್ಯ ಸಂತರ ಪರಂಪರೆಯನ್ನು ಉಳಿಸಿ, ಬೆಳೆಸುವ ಮೂಲಕ, ಮುಂದಿನ ಪೀಳಿಗೆಗಾಗಿ ಮುಂದುವರೆಸುವ ಕೆಲಸವನ್ನು ಅಭ್ಯಾಸಿ ಟ್ರಸ್ಟ್ ಮೂಲಕ ರಂಗ ಸಜ್ಜಿಕೆಯಲ್ಲಿ ಅಳವಡಿಸಿಕೊಂಡು ನಾಟಕ ರೂಪದಲ್ಲಿ ಪ್ರಸ್ತುತ ಪಡಿಸುತಿದ್ದೇವೆ. ನಮ್ಮೆಲ್ಲರ ಜವಾಬ್ದಾರಿಯ ಭಾಗವಾಗಿ ಚಾಮರಾಜನಗರ ಕಲಾವಿದರ ಒಳಗೊಂಡು ಮೊದಲ ಪ್ರದರ್ಶನ ವರನಟ ಡಾ. ರಾಜ್ ಕುಮಾರ್ ರಂಗಮಂದಿರದಲ್ಲಿ ಪ್ರದರ್ಶನಗೊಂಡಿದೆ. ಸರ್ವಧಿಕಾರಿ ಧೋರಣೆಯ ವ್ಯಕ್ತಿತ್ವದಿಂದ ಮಾನವ ಕುಲವನ್ನ ಶೋಷಿಸುವ ಮೂಲಕ, ನೆಲತಾಯಿಯನ್ನು ತನ್ನ ದುರಾಸೆಯಿಂದ, ತನ್ನಡಿಯಲ್ಲಿ ಎಲ್ಲರೂ ಇರಬೇಕು ಎನ್ನುವ ಆಹಮ್ಮಿನಿಂದ ಮೆರೆಯುವ ರಾಜನನ್ನ ಮಣಿಸುವ, ಧಮನಿಸುವ ಕಥಾ ಹಂದರ ಹೊಂದಿದೆ” ಎಂದರು.

ಶ್ರವದೊರೆ ಪಾತ್ರಧಾರಿ ಕಲೆ ನಟರಾಜ್ ಮಾತನಾಡಿ, “ಚಾಮರಾಜನಗರ ಕಲಾವಿದರ ತವರೂರು. ಆದರೆ, ಕಲೆಗಳಗೆ ಸಿಗಬೇಕಿದ್ದ ವೇದಿಕೆಗಳು, ಪೋಷಿಸುವ ಕೈಗಳು ಇಲ್ಲದಾಗಿವೆ. ಅದೆಷ್ಟೋ ಕಲೆಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ, ನೆಲೆ ಐತಿಹ್ಯದ ಮಾದಾರಿ ಮಾದಯ್ಯ ರಂಗ ಪ್ರಯೋಗ ಸಾದರ ಪಡಿಸುತಿದ್ದೇವೆ. ಕಲಾವಿದರನ್ನು, ಕಲೆಯನ್ನು ಉಳಿಸಿ, ಬೆಳಿಸಬೇಕು” ಎಂದು ಮನವಿ ಮಾಡಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ʼಈ ದಿನ ಸರಣಿʼ ಭಾಗ-1 | ಮಂಡ್ಯದ ಕಾಳಿಕಾಂಬ ಕೊಳಗೇರಿಯ ಕೋರ್ಟ್ ತೀರ್ಪು ಮೀರಿದ ಬಲಾಢ್ಯರು: ನ್ಯಾ. ಎಂ. ನಾಗಪ್ರಸನ್ನ ಕಳವಳ

ಡಿಸೆಂಬರ್ 20(ನಾಳೆ, ಶನಿವಾರ), ಸಂಜೆ 6ಕ್ಕೆ, ಚಾಮರಾಜನಗರದ ವರನಟ ಡಾ. ರಾಜ್ ಕುಮಾರ್ ರಂಗಮಂದಿರದಲ್ಲಿ ಎರಡನೇ ಪ್ರದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಂಗ ನಿರ್ದೇಶಕ ಕಿರಣ್ ಗಿರ್ಗಿ- 7411491077.





