ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕಿನ ಮಾದನಾಯಕನಹಳ್ಳಿಯಿಂದ ಸಿದ್ದರಾಮೇಶ್ವರ ದೇವಸ್ಥಾನದ ಮೂಲಕ ತಾಲ್ಲೂಕು ಗಡಿ ಸಂಪರ್ಕಿಸುವ ರಸ್ತೆಯ ಕಳಪೆ ಕಾಮಗಾರಿಯ ವಿರುದ್ಧ ನಡೆದ ಕಾನೂನು ಹೋರಾಟಕ್ಕೆ ಮೊದಲ ಯಶಸ್ಸು ಸಿಕ್ಕಿದೆ. ದೂರಿನ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪಂಚಾಯತ್ ರಾಜ್ ಇಂಜಿನಿಯರ್ ಮಂಡ್ಯ ವಿಭಾಗದ ಅಧಿಕಾರಿಗಳು ಸದರಿ ರಸ್ತೆಯ ಮರು ಡಾಂಬರೀಕರಣ (Resurfacing) ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.
ಘಟನೆಯ ಹಿನ್ನೆಲೆ: ಚನ್ನಸಂದ್ರ ಗ್ರಾಮದ ನಿವಾಸಿ, ರಾಜ್ಯ ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಲಕ್ಷ್ಮಣ ಸಿ ಎಸ್ ಅವರು ಮಂಡ್ಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. 2022-23ನೇ ಸಾಲಿನ ಪ್ಯಾಕೇಜ್ ಸಂಖ್ಯೆ ಎಂಡಿಆರ್: ನಂ:4ರ ಅಡಿಯಲ್ಲಿ ನಡೆದ ಮೂರು ರಸ್ತೆಗಳು ಹಾಗೂ ಇತರ ನಾಲ್ಕು ರಸ್ತೆ ಕಾಮಗಾರಿಗಳು ಕಾಮಗಾರಿಗಳು ಅತ್ಯಂತ ಕಳಪೆಯಾಗಿದ್ದು, ಸಾರ್ವಜನಿಕ ಹಣ ದುರುಪಯೋಗವಾಗಿದೆ ಎಂದು ಅವರು ಗಂಭೀರವಾಗಿ ಆಪಾದಿಸಿ ದೂರು ನೀಡಿದ್ದರು.


ಮುಖ್ಯವಾಗಿ ಮದ್ದೂರು ತಾಲ್ಲೂಕಿನ ಮಾದನಾಯಕನಹಳ್ಳಿ-ಸಿದ್ದರಾಮೇಶ್ವರ ದೇವಸ್ಥಾನದ ರಸ್ತೆ, ಆರ್ ಹೆಚ್ ರಸ್ತೆಯಿಂದ ಅರೆಕಲ್ ದೊಡ್ಡ ಕ್ರಾಸ್, ಹಾಗೂ ತೊಪ್ಪನಹಳ್ಳಿ-ಚಂದಹಳ್ಳಿ ಕ್ರಾಸ್ ರಸ್ತೆಗಳು ನಿರ್ಮಾಣವಾದ ಕೆಲವೇ ದಿನಗಳಲ್ಲಿ ಕಿತ್ತು ಹೋಗಿದ್ದವು. ಸರಿ ಪ್ರಮಾಣದ ಜಲ್ಲಿ ಸಾಮಗ್ರಿಗಳು, ಬಿಟುಮಿನ್ ಅಂಶದ ಕೊರತೆ ಮತ್ತು ಸರಿಯಾದ ಯಂತ್ರೋಪಕರಣ ಬಳಸದ ಕಾರಣ ರಸ್ತೆಗಳು ಗುಂಡಿ ಬಿದ್ದಿದ್ದವು.
ಇದನ್ನೂ ಓದಿ: ಮದ್ದೂರು | ನಮಗೆ ಮಠ ಕಟ್ಟಿಸಿಕೊಡಿ: ಮದುವೆಯಾಗಲು ಹೆಣ್ಣು ಸಿಗದ ಯುವಕರಿಂದ ಗ್ರಾ.ಪಂ.ಗೆ ಅರ್ಜಿ!
ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ: ಕಾರ್ಯಪಾಲಕ ಇಂಜಿನಿಯರ್ ಶಿವಚಂದ್, ಎಇಇ ಬಸವರಾಜು, ಎಇ ಮಹದೇವ ಮತ್ತು ಸೂರ್ಯಕಾಂತ್ ಅವರ ಮೇಲುಸ್ತುವಾರಿಯಲ್ಲಿ ನಡೆದಿದ್ದ ಈ ಕಾಮಗಾರಿಗಳ ಬಗ್ಗೆ ಲಕ್ಷ್ಮಣ ಅವರು ಫೋಟೋ ಮತ್ತು ವೀಡಿಯೋ ಸಾಕ್ಷ್ಯಗಳ ಸಮೇತ ಲೋಕಾಯುಕ್ತಕ್ಕೆ ಅಫಿಡವಿಟ್ ಸಲ್ಲಿಸಿದ್ದರು. ಎದುರುದಾರ ಅಧಿಕಾರಿಗಳು ತಮ್ಮ ಸಮರ್ಥನೆ ನೀಡಿದ್ದರೂ, ತಾಂತ್ರಿಕ ತಂಡದಿಂದ ಸ್ಥಳ ಪರಿಶೀಲನೆ ನಡೆಸುವಂತೆ ಲಕ್ಷ್ಮಣ ಅವರು ಪಟ್ಟು ಹಿಡಿದಿದ್ದರು.



ಹೋರಾಟಕ್ಕೆ ಸಂದ ಜಯ: ಈ ಕಾನೂನು ಹೋರಾಟದ ತೀವ್ರತೆಯನ್ನು ಅರಿತ ಸಂಬಂಧಪಟ್ಟ ಇಲಾಖೆಯು, ದೂರಿನಲ್ಲಿ ಉಲ್ಲೇಖಿಸಲಾಗಿದ್ದ ಮೊದಲ ರಸ್ತೆಯಾದ ‘ಮಾದನಾಯಕನಹಳ್ಳಿ-ಸಿದ್ದರಾಮೇಶ್ವರ ದೇವಸ್ಥಾನದ ರಸ್ತೆ’ಯನ್ನು ಇದೀಗ ಮರು ಡಾಂಬರೀಕರಣ ಮಾಡುವ ಮೂಲಕ ದುರಸ್ತಿಪಡಿಸಿದೆ. ಇದು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ನಾಗರಿಕನ ಜಯವಾಗಿದ್ದು, ಉಳಿದ ಆರು ರಸ್ತೆಗಳ ಕಾಮಗಾರಿಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಲಕ್ಷ್ಮಣ ಸಿ ಎಸ್ ತಿಳಿಸಿದ್ದಾರೆ.





