ಕೊಡಗು ಜಿಲ್ಲೆ ಮಡಿಕೇರಿ, ಸೋಮವಾರಪೇಟೆ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಹುದುಗೂರು ಗ್ರಾಮದಲ್ಲಿ ಮನೆಯ ಗೇಟ್ ಮುರಿದು ಒಳನುಗ್ಗಿದ ಘಟನೆ ನಡೆದಿದೆ.
ಬೆಂಡೆಬೆಟ್ಟ ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಹಾರಂಗಿ ನದಿಯನ್ನು ದಾಟಿದ್ದ ಎರಡು ಕಾಡಾನೆಗಳು ರೈತ ಶಿವಕುಮಾರ್ ಅವರ ಮನೆಯ ಮುಂಭಾಗದ ಕಬ್ಬಿಣದ ಗೇಟನ್ನು ಮುರಿದಿವೆ. ಬಳಿಕ ಮನೆಯ ಹತ್ತಿರದ ಜಮೀನಿಗೆ ಪ್ರವೇಶಿಸಿ ಹುಲುಸಾಗಿ ಬೆಳೆದಿದ್ದ ಅಡಿಕೆ ಮತ್ತು ಬಾಳೆ ಗಿಡಗಳನ್ನು ತುಳಿದುಹಾಕಿವೆ.
ಕಾಡಾನೆಗಳು ಹುದುಗೂರು ಮೀಸಲು ಅರಣ್ಯ ಮತ್ತು ಹಾರಂಗಿ ನದಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದು, ಸಂಜೆ 6 ಗಂಟೆಯ ಬಳಿಕ ಮುಖ್ಯ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ರಸ್ತೆಯಲ್ಲಿ ಓಡಾಡಲು ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ.
ಈ ಸುದ್ದಿಒ ಓದಿದ್ದೀರಾ? ಚಾಮರಾಜನಗರ | ಹೆಚ್ಚಿದ ಆನೆ ಹಾವಳಿ; ತಡೆಗೆ ಅರಣ್ಯ ಇಲಾಖೆ ಸಿದ್ಧತೆ
“ಕಾಡಾನೆಗಳು ಗ್ರಾಮದಲ್ಲೆಲ್ಲ ದಾಂಧಲೆ ನಡೆಸುತ್ತಿವೆ. ಬೀಡುಬಿಟ್ಟಿರುವ ಆನೆಗಳನ್ನು ಆನೆಕಾಡು ಮೀಸಲು ಅರಣ್ಯ ಪ್ರದೇಶಕ್ಕೆ ಓಡಿಸಬೇಕು” ಎಂದು ಸ್ಥಳೀಯರು, ಹುದಗೂರು ವಲಯ ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.





