ಕೇರಳ ಮೂಲದ ಮೀನುಗಾರ ರಥೀಶ್ (37) ರವರು ಮಲ್ಪೆ ಬಂದರಿನ ಸಮೀಪ ಸಮುದ್ರದಲ್ಲಿ ಆಕಸ್ಮಿಕವಾಗಿ ಬೋಟಿನಿಂದ ಬಿದ್ದು ಮೃತಪಟ್ಟ ಘಟನೆ ನ.7ರಂದು ನಡೆದಿದೆ.
ಮೃತ ಯುವಕನ ಮಾವ ಕಮರುದೀನ್ ಎಸ್ ನೀಡಿದ ಮಾಹಿತಿಯಂತೆ, ಮೃತ ರಥೀಶ್ ಕೇರಳದಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಈ ವರ್ಷ ತುಫಾನ್ ಕಾರಣದಿಂದ ಮಲ್ಪೆ ಬಂದರಿಗೆ ಬಂದಿದ್ದರು. ಅವರು IND-TN-15-MM-4121 ನಂಬರ್‌ನ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿದ್ದರು. ನ.7ರಂದು ಬೆಳಗ್ಗೆ ಸುಮಾರು 10.15ರ ಸುಮಾರಿಗೆ ಬೋಟು ಸಮುದ್ರಕ್ಕೆ ಹೊರಡುವ ವೇಳೆ ಆಕಸ್ಮಿಕವಾಗಿ ರಥೀಶ್ ಬೋಟಿನಿಂದ ಸಮುದ್ರಕ್ಕೆ ಬಿದ್ದರು. ಸಮಾಜ ಸೇವಕ ಈಶ್ವರ ಮಲ್ಪೆ ರವರು ತಕ್ಷಣ ಹುಡುಕಾಟ ನಡೆಸಿ ಸುಮಾರು 10.30ಕ್ಕೆ ರಥೀಶ್‌ರನ್ನು ಪತ್ತೆಹಚ್ಚಿದರು. ಅವರನ್ನು ಮೇಲಕ್ಕೆ ಎತ್ತಿ ಪ್ರಾಥಮಿಕ ಚಿಕಿತ್ಸೆ ನೀಡಿದರೂ ಯಾವುದೇ ಪ್ರತಿಕ್ರಿಯೆ ನಡೆಯಲಿಲ್ಲ. ನಂತರ ಅವರನ್ನು ತಕ್ಷಣ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ವೈದ್ಯರು ರಥೀಶ್ ಈಗಾಗಲೇ ಸಾವನ್ನಪ್ಪಿರುವುದಾಗಿ ದೃಢಪಡಿಸಿದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




