ಉಡುಪಿ ಜಿಲ್ಲೆಯ ಹೆಸರಾಂತ ಮಲ್ಪೆ ಬಂದರು ಪ್ರದೇಶದಲ್ಲಿ ಮೀನುಗಾರಿಕಾ ಕಾರ್ಮಿಕರ ಮೇಲೆ ನಡೆಯುತ್ತಿರುವ ಹಲ್ಲೆ, ದಬ್ಬಾಳಿಕೆ ಹಾಗೂ ದೌರ್ಜನ್ಯ ಪ್ರಕರಣಗಳನ್ನು ತೀವ್ರವಾಗಿ ಖಂಡಿಸಿ ಇಂದು ಉಡುಪಿಯಲ್ಲಿ ಪ್ರತಿಭಟನೆ ನಡೆಯಿತು. ಮಲ್ಪೆ ಬಂದರಿನ ಒಳಗೆ ತಕ್ಷಣ ಪೊಲೀಸ್ ಔಟ್‌ಪೋಸ್ಟ್ ಸ್ಥಾಪಿಸಬೇಕೆಂದು ಆಗ್ರಹಿಸಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದ ಸಂಘಟನೆಗಳು, ಬಳಿಕ ಅಪರ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದವು.

ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘ (ರಿ) (ಸಿಐಟಿಯು), ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ), ಸಹಬಾಳ್ವೆ ಉಡುಪಿ ಜಿಲ್ಲೆ ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವರು ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಮನವಿಯಲ್ಲಿ ಉಲ್ಲೇಖಿಸಿದಂತೆ, ಇತ್ತೀಚೆಗೆ ಮೀನು ಏಲಂ ಕಾರ್ಮಿಕ ಶೇಖ್ ಅಯ್ಯೂಬ್ ಅವರ ಮೇಲೆ ಬೋಟ್ ಮಾಲಿಕ ಮಿಥುನ್ ಕರ್ಕೇರ ಎನ್ನುವವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಹೃದಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿರುವ ಹಾಗೂ ಸ್ಟಂಟ್ ಅಳವಡಿಸಿಕೊಂಡಿರುವ ಅಯ್ಯೂಬ್ ಅವರಿಗೆ ಕಿಡ್ನಿ ಸಮಸ್ಯೆಯೂ ಇದೆ. ಉಪವಾಸದಲ್ಲಿದ್ದ ಸಂದರ್ಭದಲ್ಲಿ ಬಿಡುವಂತೆ ಮನವಿ ಮಾಡಿದರೂ, ಸಾರ್ವಜನಿಕರ ಎದುರೇ ಸುಮಾರು ನೂರು ಮೀಟರ್‌ವರೆಗೆ ಥಳಿಸಿಕೊಂಡು ಹೋಗಿದ್ದರೆಂಬ ಆರೋಪ ವ್ಯಕ್ತವಾಗಿದೆ. ಹಲ್ಲೆಯಿಂದ ಪ್ರಜ್ಞೆ ತಪ್ಪಿದ ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪ್ರಕರಣ ದಾಖಲಾದರೂ, ಆರೋಪಿಯು ತನ್ನ ರಾಜಕೀಯ ಪ್ರಭಾವ ಬಳಸಿಕೊಂಡು ಸಂತ್ರಸ್ಥನ ಮೇಲೆಯೇ ಪ್ರತಿಕಾರಕ ದೂರು ದಾಖಲಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ ಎಂದು ಸಂಘಟನೆಗಳು ಆರೋಪಿಸಿವೆ. ಬಂದರು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಲಾಗಿದೆ.
ಈ ಹಿಂದೆ ಪರಿಶಿಷ್ಟ ಜಾತಿಯ ಮಹಿಳಾ ಕಾರ್ಮಿಕೆಯ ಮೇಲೆ ಕಳ್ಳತನದ ಆರೋಪ ಹೊರೆಸಿ ಹಲ್ಲೆ ನಡೆಸಿದ ಘಟನೆ ವೈರಲ್ ಆಗಿ ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಪ್ರಕರಣ ದಾಖಲಾಗಿದ್ದರೂ, ನಂತರ ರಾಜಕೀಯ ಒತ್ತಡದಿಂದ ಸಂತ್ರಸ್ಥೆ ಪ್ರಕರಣ ಹಿಂಪಡೆಯುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಪ್ರತಿಭಟನಾಕಾರರು ದೂರಿದರು. ಇಂತಹ ಘಟನೆಗಳು ವಿದ್ಯಾವಂತರ ಜಿಲ್ಲೆಯ ಖ್ಯಾತಿಗೆ ಧಕ್ಕೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಲ್ಪೆ ಬಂದರು ಉಡುಪಿ ಜಿಲ್ಲೆಯ ಸಾವಿರಾರು ಕುಟುಂಬಗಳ ಜೀವನಾಧಾರವಾಗಿದೆ. ಪ್ರತಿದಿನ ಬೋಟ್ ಕಲಾಸಿಗಳು, ಏಲಂ ಕಾರ್ಮಿಕರು, ಮೀನು ಬುಟ್ಟಿ ಹೊರುವವರು, ಲೋಡಿಂಗ್-ಅನ್‌ಲೋಡಿಂಗ್ ಕಾರ್ಮಿಕರು, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ಅನೇಕ ವರ್ಗದ ಜನರು ಇಲ್ಲಿ ದುಡಿದು ಜೀವನ ನಡೆಸುತ್ತಿದ್ದಾರೆ. ಆದರೆ ಇತ್ತೀಚಿನ ಘಟನೆಗಳು ಕಾರ್ಮಿಕರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಕೆಲವರ ಪಾಳೇಗಾರಿಕೆ ಮನೋಭಾವದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿಭಟನಾಕಾರರು ಸರ್ಕಾರ ಹಾಗೂ ಜಿಲ್ಲಾಡಳಿತದ ಮುಂದಿಡಿದ ಪ್ರಮುಖ ಬೇಡಿಕೆಗಳು ಇಂತಿವೆ:
- ಹಲ್ಲೆಗೊಳಗಾದ ಕಾರ್ಮಿಕ ಶೇಖ್ ಅಯ್ಯೂಬ್ ಅವರಿಗೆ ಸರ್ಕಾರದಿಂದ ಪರಿಹಾರ ಧನ ನೀಡಬೇಕು.
- ಹಲ್ಲೆ ಆರೋಪದ ಹಿನ್ನೆಲೆಯಲ್ಲಿ ಮಿಥುನ್ ಕರ್ಕೇರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
- ಶೇಖ್ ಅಯ್ಯೂಬ್ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ತಕ್ಷಣ ಹಿಂಪಡೆಯಬೇಕು.
- ಮಲ್ಪೆ ಬಂದರು ಪ್ರದೇಶದಲ್ಲಿ ಶಾಶ್ವತ ಪೊಲೀಸ್ ಔಟ್‌ಪೋಸ್ಟ್ ಸ್ಥಾಪಿಸಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು.
- ಮಹಿಳಾ ಕಾರ್ಮಿಕರ ಭದ್ರತೆಗೆ ವಿಶೇಷ ನಿಯಮಾವಳಿ ಜಾರಿಗೆ ತರಬೇಕು.
- ಕಾರ್ಮಿಕರ ಮೇಲೆ ಹಲ್ಲೆ ನಡೆದ ತಕ್ಷಣ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ರಕ್ಷಣೆ ಒದಗಿಸಬೇಕು.
- ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಆಗಮಿಸುವ ಕಾರ್ಮಿಕರಿಗೆ ವಿಶೇಷ ಭದ್ರತೆ ಹಾಗೂ ಅಪಘಾತ ಅಥವಾ ಮರಣ ಸಂಭವಿಸಿದಲ್ಲಿ ಅವರ ಕುಟುಂಬಗಳಿಗೆ ಪರಿಹಾರ ನೀಡಬೇಕು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್, ಮಲ್ಪೆ ಬಂದರಿನಲ್ಲಿ ಕಾರ್ಮಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕಾನೂನು ಎಲ್ಲರಿಗೂ ಸಮಾನವಾಗಿರಬೇಕು ಎಂದು ಒತ್ತಾಯಿಸಿದರು.
ಈದಿನ.ಕಾಮ್ ಜೊತೆ ಮಾತನಾಡಿದ ಸಹಬಾಳ್ವೆ ಉಡುಪಿ ಸಂಚಾಲಕ ಪ್ರೊ. ಪಣಿರಾಜ್, ಮಲ್ಪೆ ಬಂದರಿನಲ್ಲಿ ಒಂದೇ ವರ್ಷದ ಅವಧಿಯಲ್ಲಿ ಇದು ಎರಡನೇ ಘಟನೆ ಬೆಳಕಿಗೆ ಬಂದಿರುವುದಾಗಿ ಹೇಳಿದರು. ಕಳೆದ ವರ್ಷ ಮಾರ್ಚ್ 18ರಂದು ಲಂಬಾಣಿ ಸಮುದಾಯದ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಗುಂಪೊಂದು ಹಲ್ಲೆ ನಡೆಸಿದ ಘಟನೆ ಸಂಭವಿಸಿತ್ತು. ಆ ಘಟನೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿ ಪ್ರತಿಭಟನೆಗಳು ನಡೆದಿದ್ದವು. ಪ್ರಕರಣ ದಾಖಲಾದರೂ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರು ಆ ಮಹಿಳೆಯ ಮೇಲೆ ಒತ್ತಡ ಹೇರಿ ಕೇಸ್‌ನ್ನು ಹಿಂತೆಗೆದುಕೊಳ್ಳುವಂತೆ ಮಾಡಿದರು ಎಂದು ಅವರು ಆರೋಪಿಸಿದರು.
ಅದರ ನಂತರ ಅಲ್ಲಿ ಶಾಂತಿ ನೆಲೆಸಿದೆ ಎಂದು ಭಾವಿಸಿದ್ದರೆ, ಅದು ತಪ್ಪಾಗುವಂತೆ ಈ ವರ್ಷ ಫೆಬ್ರವರಿ 26ರಂದು ಮತ್ತೊಂದು ಘಟನೆ ನಡೆದಿದೆ. ಮಲ್ಪೆಯಲ್ಲಿ ಮೀನು ಏಲಂ ನಡೆಸುತ್ತಿದ್ದ ಶೇಖ್ ಅಯ್ಯೂಬ್ ಎಂಬ ವರ್ತಕರ ಮೇಲೆ ಕೆಲವು ಮಂದಿ ತಾವೇ ಆರೋಪ ಹೊರಿಸಿ, ತಾವೇ ತೀರ್ಪು ಪ್ರಕಟಿಸಿ, ತಾವೇ ಶಿಕ್ಷೆ ವಿಧಿಸುವ ರೀತಿಯ ಫ್ಯಾಸಿಸ್ಟ್ ಮನೋಭಾವದ ಕೃತ್ಯ ನಡೆಸಿದ್ದಾರೆ ಎಂದು ಅವರು ದೂರಿದರು. ಕಳೆದ ಎರಡು ವರ್ಷಗಳಲ್ಲಿ ಇಂತಹ ಇನ್ನಷ್ಟು ಪ್ರತ್ಯೇಕ ಹಾಗೂ ಹಿಂಸಾತ್ಮಕ ಘಟನೆಗಳು ನಡೆದಿರುವ ಸಾಧ್ಯತೆ ಇದ್ದರೂ, ಅವುಗಳ ಸಂಪೂರ್ಣ ವಿವರ ನಮಗೆ ತಿಳಿದಿಲ್ಲ ಎಂದು ಹೇಳಿದರು.

ಈ ಜಿಲ್ಲೆಯ ಕೆಲವು ರಾಜಕಾರಣಿಗಳು ಇಂತಹ ಫ್ಯಾಸಿಸ್ಟ್ ರಾಜಕೀಯವನ್ನು ಉತ್ತೇಜಿಸುತ್ತಿದ್ದಾರೆ. ಮಲ್ಪೆ ಬಂದರನ್ನು ತಮ್ಮ ರಾಜಕೀಯ ಉದ್ದೇಶಗಳಿಗೆ ಕಾಲಾಳುಗಳನ್ನು ಸೇರುವ ವೇದಿಕೆಯಾಗಿಸಿಕೊಂಡಿದ್ದಾರೆ. ಬಡವರನ್ನು ಬಡವರ ವಿರುದ್ಧ, ಕೆಳ ಜಾತಿಯವರನ್ನು ಕೆಳ ಜಾತಿಯವರ ವಿರುದ್ಧ, ಅಧಿಕಾರ ಹೀನರನ್ನು ಅಧಿಕಾರ ಹೀನರ ವಿರುದ್ಧ ಎತ್ತಿಕಟ್ಟುವ ಮೂಲಕ ತಮ್ಮ ರಾಜಕೀಯ ಬೆಂಬಲವನ್ನು ಬಲಪಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಹಿಂಸಾತ್ಮಕ ಕೃತ್ಯಗಳು ನಡೆದರೂ, ಅವುಗಳನ್ನು ಸಮರ್ಥಿಸುವ ಮತ್ತು ತಪ್ಪಿತಸ್ಥರನ್ನು ರಕ್ಷಿಸುವ ವಾತಾವರಣ ನಿರ್ಮಾಣವಾಗಿದೆ. ತಮ್ಮ ಬದುಕಿನ ಹಕ್ಕಿಗಾಗಿ ಒಗ್ಗಟ್ಟಾಗಿ ಹೋರಾಡಬೇಕಾದ ಬಡವರನ್ನು ವಿಭಜಿಸಿ, ಅವರನ್ನೇ ರಾಜಕೀಯದ ಸಾಧನಗಳಾಗಿ ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಮಲ್ಪೆ ಬಂದರಿನ ಪರಿಸ್ಥಿತಿ ಸುಧಾರಿಸಬೇಕಾದರೆ, ಕರ್ನಾಟಕ ಸರ್ಕಾರ ಈ ರಾಜಕೀಯ ಸ್ವರೂಪವನ್ನು ಸಮಗ್ರವಾಗಿ ಅರ್ಥಮಾಡಿಕೊಂಡು ತಕ್ಷಣ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಮಲ್ಪೆ ಫ್ಯಾಸಿಸ್ಟ್ ರಾಜಕೀಯದ ಪ್ರಯೋಗ ಕ್ಷೇತ್ರವಾಗಿ ಮುಂದುವರಿಯುವ ಅಪಾಯವಿದೆ. ಇಂತಹ ಹಿಂಸಾಚಾರಗಳಿಗೆ ತಡೆಯಿಲ್ಲದ ಪರಿಸ್ಥಿತಿ ಉಂಟಾಗಬಹುದು. ಇದನ್ನು ವಿರೋಧಿಸಿ ಇಂದು ಪ್ರತಿಭಟನಾ ಸಭೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಪ್ರತಿಭಟನೆಯಲ್ಲಿ ಮಂಜುನಾಥ ಗಿಳಿಯಾರ್, ಶ್ಯಾಮ್ ರಾಜ್ ಬಿರ್ತಿ, ಫಣಿರಾಜ್, ಇದ್ರೀಸ್ ಹೂಡೆ, ಫಾದರ್ ವಿಲಿಯಂ ಮಾರ್ಟೀಸ್, ಹುಸೇನ್ ಕೋಡಿಬೆಂಗ್ರೆ, ಅಜೀಜ್, ಸಿಐಟಿಯು ಜಿಲ್ಲಾ ಅಧ್ಯಕ್ಷ ಶಶಿಧರ್ ಗೊಲ್ಲ, ಕಾರ್ಯದರ್ಶಿ ಚಂದ್ರಶೇಖರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತ ಹಾಗೂ ನಿರೂಪಣೆಯನ್ನು ಜಿಲ್ಲಾ ಕಾರ್ಯದರ್ಶಿ ಕವಿರಾಜ್ ಎಸ್. ಕಾಂಚನ್ ನಿರ್ವಹಿಸಿದರು.
ಪ್ರತಿಭಟನೆಯ ನಂತರ ಸಂಘಟಕರು ಅಪರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮಲ್ಪೆ ಬಂದರಿನಲ್ಲಿ ನಡೆದ ಘಟನೆಗಳ ಕುರಿತು ವಿವರವಾಗಿ ಚರ್ಚಿಸಿ ಮನವಿ ಸಲ್ಲಿಸಿತು.





