ಉಡುಪಿ | ಮಲ್ಪೆ ಗಾಂಧಿ ಶತಾಬ್ಧಿ ಸರಕಾರಿ ಮಾದರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವೇದಿಕೆಯ ಉಡುಪಿ ಜಿಲ್ಲಾ ಸಂಚಾಲಕ ಹಾಗೂ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಾಂಜಿ ಕನ್ನಡ ತಾಯಿ ಭುವನೇಶ್ವರಿಗೆ ಪುಷ್ಪಾರ್ಚಾಣೆಗೈದರು. ಬಳಿಕ ಮಾತನಾಡಿದ ಅವರು, ಕನ್ನಡ ಭಾಷೆ, ಸಂಸ್ಕೃತಿ ಉಳಿಯಲು ಕನ್ನಡ ಶಾಲೆಗಳ ಜೀವಂತಿಕೆ ಅತೀ ಅಗತ್ಯವಾಗಿದೆ. ವಿದ್ಯಾರ್ಥಿ ಗಳಲ್ಲಿ ಭಾಷಾಭಿಮಾನ ಮೂಡಿಸಲು ಶಿಕ್ಷಕರು ಶ್ರಮಿಸಬೇಕು ಎಂದರು.
ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರವಿರಾಜ್ ವಹಿಸಿದ್ದರು. ಹಳೆಯ ವಿದ್ಯಾರ್ಥಿ ಮಂಜುನಾಥ್ ಕೊಳ ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಲತಾ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರೇಮಾನಂದ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಗೌರವ ಶಿಕ್ಷಕಿ ಪೂರ್ಣಿಮಾ ವಂದಿಸಿದರು. ಬಳಿಕ ರಾಮಾಂಜಿ ಮಕ್ಕಳಿಗೆ ಕನ್ನಡದ ಹೆಸರಾಂತ ಕವಿಗಳ ಶಿಶು ಗೀತೆಗಳನ್ನು ಹಾಡಿ ಮಕ್ಕಳನ್ನು ರಂಜಿಸಿದರು.





