ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ತೊಟ್ಟಂ ಗ್ರಾಮದಲ್ಲಿರುವ ಸಂತ ಅನ್ನಮ್ಮನವರ ನವೀಕೃತ ಚಾಪೆಲ್ (ಕಿರು ದೇವಾಲಯ)ದ ಉದ್ಘಾಟನೆ ಹಾಗೂ ಆಶೀರ್ವಚನ ಕಾರ್ಯಕ್ರಮ ಫೆಬ್ರವರಿ 11ರಂದು ಬುಧವಾರ ಸಂಜೆ 4.30ಕ್ಕೆ ಜರುಗಲಿದೆ. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ| ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರು ನವೀಕೃತ ಚಾಪೆಲ್ ಅನ್ನು ಉದ್ಘಾಟಿಸಿ ಪವಿತ್ರ ಬಲಿಪೂಜೆಯೊಂದಿಗೆ ಆಶೀರ್ವಚನ ನೀಡಲಿದ್ದಾರೆ.
ಬಲಿಪೂಜೆಯ ನಂತರ ಜಪಸರ ಪ್ರಾರ್ಥನೆ ನಡೆಯಲಿದ್ದು, ತದನಂತರ ಕಿರು ದೇವಾಲಯದಿಂದ ಮುಖ್ಯ ದೇವಾಲಯದವರೆಗೆ ಮೇಣದ ಬತ್ತಿಗಳನ್ನು ಹಿಡಿದು ಭಕ್ತರ ಮೆರವಣಿಗೆ ನಡೆಯಲಿದೆ. ಬಳಿಕ ನಡೆಯುವ ಕಿರು ಸಭಾ ಕಾರ್ಯಕ್ರಮದಲ್ಲಿ ಚಾಪೆಲ್ ನವೀಕರಣ ಕಾರ್ಯಕ್ಕೆ ಸಹಕರಿಸಿದವರಿಗೆ ಗೌರವ ಸಲ್ಲಿಸಲಾಗುವುದು.
ಇತಿಹಾಸದ ನೆನಪು
ಹಲವು ವರ್ಷಗಳ ಹಿಂದೆ ತೊಟ್ಟಂ ಪ್ರದೇಶದ ಕೆಥೊಲಿಕ್ ಬಂಧುಗಳು ತಮ್ಮ ಆಧ್ಯಾತ್ಮಿಕ ಅಗತ್ಯಗಳಿಗಾಗಿ ಕಲ್ಯಾಣಪುರ ಮಿಲಾಗ್ರಿಸ್ ಮಾತೆಯ ದೇವಾಲಯವನ್ನು ಅವಲಂಬಿಸಿಕೊಂಡಿದ್ದರು. 1850ರ ದಶಕದಲ್ಲಿ ತೊಟ್ಟಂ ಗ್ರಾಮದ ಪ್ರಭಾವಿ ವ್ಯಕ್ತಿಯಾಗಿದ್ದ ದಿವಂಗತ ಮಿಗೇಲ್ ವಾಜ್ ಅವರು ತಮ್ಮ ಮನೆಯ ಸಮೀಪ ಒಂದು ದೇವಾಲಯ ನಿರ್ಮಾಣವಾಗಬೇಕೆಂಬ ಆಶಯದಿಂದ ಗೋವಾ ಧರ್ಮಕ್ಷೇತ್ರದ ಬಿಷಪ್ ಅವರ ಅನುಮತಿ ಪಡೆದು 1885ರಲ್ಲಿ ಚಾಪೆಲ್ ನಿರ್ಮಾಣ ಕಾರ್ಯ ಆರಂಭಿಸಿದರು. 1905 ಮೇ 24ರಂದು ಚಾಪೆಲ್ ಉದ್ಘಾಟನೆಗೊಂಡಿತು.
ನಂತರ 1933 ಮೇ 19ರಂದು ತೊಟ್ಟಂ ಸಂತ ಅನ್ನಮ್ಮ ಮಾತೆಗೆ ಸಮರ್ಪಿತ ಸ್ವತಂತ್ರ ದೇವಾಲಯ ನಿರ್ಮಾಣಗೊಂಡ ಬಳಿಕ, ಚರ್ಚಿನ ಆಡಳಿತದಡಿ ಚಾಪೆಲ್ ಮೇಲ್ವಿಚಾರಣೆ ಬಂದು ವಾರಕ್ಕೆ ಒಂದು ಬಲಿಪೂಜೆ ಅರ್ಪಿಸುವ ನಿರ್ಧಾರ ಕೈಗೊಳ್ಳಲಾಯಿತು.
ನವೀಕರಣದ ಅಗತ್ಯ
ಕಾಲಕ್ರಮೇಣ ಜನಸಂಖ್ಯೆ ಹೆಚ್ಚಿದಂತೆ ಚಾಪೆಲ್ ಚಿಕ್ಕದಾಗಿ ಸುಮಾರು 50 ಮಂದಿ ಮಾತ್ರ ಒಳಗೆ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ಧಾರ್ಮಿಕ ಹಾಗೂ ಭಕ್ತಿಪರ ಚಟುವಟಿಕೆಗಳಿಗೆ ಸ್ಥಳಾಭಾವ ಎದುರಾಯಿತು. ಈ ಹಿನ್ನೆಲೆಯಲ್ಲಿ 2010ರಲ್ಲಿ ವಾಜ್ ಕುಟುಂಬವು ಚಾಪೆಲ್ ಅನ್ನು ಸಂಪೂರ್ಣವಾಗಿ ಚರ್ಚಿನ ಅಧೀನಕ್ಕೆ ಒಪ್ಪಿಸುವ ನಿರ್ಧಾರ ಕೈಗೊಂಡಿತು. ಅಂದಿನ ಧರ್ಮಗುರು ವಂ| ಫ್ರೆಡ್ರಿಕ್ ಡಿ’ಸೋಜಾ ಅವರ ಮಾರ್ಗದರ್ಶನದಲ್ಲಿ ದಾಖಲೆಗಳನ್ನು ಸಿದ್ಧಪಡಿಸಿ, ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಬಿಷಪ್ ಆಲೋಶಿಯಸ್ ಡಿ’ಸೋಜಾ ಅವರಿಗೆ ಸಲ್ಲಿಸಲಾಯಿತು. ಬಳಿಕ ದುರಸ್ತಿ ಕಾರ್ಯ ಕೈಗೊಳ್ಳಲಾಗಿದ್ದು, ಜುಲೈ 26ರಂದು ಸಂತ ಅನ್ನಾ ಮಾತೆಯ ಹಬ್ಬದಂದು ಧರ್ಮಾಧ್ಯಕ್ಷರು ಬಲಿಪೂಜೆ ಅರ್ಪಿಸಿದ್ದರು.
ಪ್ರಸ್ತುತ ಅಭಿವೃದ್ಧಿ
ಭಕ್ತರ ಸಂಖ್ಯೆ ಹೆಚ್ಚಿದಂತೆ ಮೂಲ ಸೌಲಭ್ಯಗಳ ಕೊರತೆ ಸ್ಪಷ್ಟವಾಗಿದ್ದು, ಪ್ರಸ್ತುತ ಧರ್ಮಗುರು ವಂ| ಡೆನಿಸ್ ಡೆಸಾ ಅವರ ನೇತೃತ್ವದಲ್ಲಿ ಹಾಗೂ ಚರ್ಚಿನ ಸದಸ್ಯರ ಸಹಕಾರದೊಂದಿಗೆ ಚಾಪೆಲ್ ಅನ್ನು ಸಂಪೂರ್ಣವಾಗಿ ನವೀಕರಿಸುವ ನಿರ್ಧಾರ ಕೈಗೊಳ್ಳಲಾಯಿತು. ವಾಜ್ ಕುಟುಂಬ ಈ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಿತು. 2024 ಮೇ 28ರಂದು ಹೊಸ ಕಟ್ಟಡದ ಆಶೀರ್ವಚನದೊಂದಿಗೆ ಕಾಮಗಾರಿ ಆರಂಭಗೊಂಡಿತು.
ನವೀಕೃತ ಚಾಪೆಲ್ ಒಳಭಾಗದಲ್ಲಿ ಸುಮಾರು 250 ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಹೊರಭಾಗದಲ್ಲಿ ಇನ್ನೂ 200 ಮಂದಿಗೆ ಅನುಕೂಲವಿದೆ. ಹಿಂದಿನ ಬಲಿಪೀಠವನ್ನು ಹಾಗೆಯೇ ಉಳಿಸಿಕೊಂಡು ಸುಂದರವಾಗಿ ಅಲಂಕರಿಸಲಾಗಿದೆ. ದೇವಾಲಯದ ನವೀಕರಣಕ್ಕೆ ಕರ್ನಾಟಕ ಸರ್ಕಾರದ ಕ್ರೈಸ್ತ ಅಭಿವೃದ್ಧಿ ನಿಗಮದ ಸಹಾಯವೂ ಲಭಿಸಿದೆ.
ಸಂತ ಅನ್ನಾ ಮಾತೆಯ ದಯೆಯಿಂದ ಅನೇಕ ಭಕ್ತರಿಗೆ ವರ ದೊರೆತಿದ್ದು, ವಿಶೇಷವಾಗಿ ಮಹಿಳೆಯರಲ್ಲಿ ಅಪಾರ ಭಕ್ತಿ ಕಂಡುಬರುತ್ತದೆ. ಕೆಲಸ ಆರಂಭಿಸುವ ಮುನ್ನ ಅಥವಾ ಪ್ರಯಾಣಕ್ಕೂ ಮುನ್ನ ಸಂತ ಅನ್ನಾ ಮಾತೆಗೆ ನಮಸ್ಕರಿಸುವ ಸಂಪ್ರದಾಯ ಇಲ್ಲಿನ ಜನರಲ್ಲಿ ಸಾಮಾನ್ಯವಾಗಿದೆ ಎಂದು ಚರ್ಚಿನ ಧರ್ಮಗುರು ವಂ| ಡೆನಿಸ್ ಡೆಸಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





