ಕುಡಿದ ಮತ್ತಿನಲ್ಲಿ ಪತಿಯೇ ತನ್ನ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದಲ್ಲಿ ನಡೆದಿದೆ.
ಪದ್ಮಾಕ್ಷಿ(40) ಮೃತ ದುರ್ದೈವಿ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಒಬ್ಬ ಮಗಳು ವಿದ್ಯಾಭ್ಯಾಸ ಮೊಟಕುಗೊಳಿಸಿ ಮನೆಯಲ್ಲಿಯೇ ಇದ್ದಾರೆ. ಇನ್ನೋರ್ವ ಮಗಳು ಬೇಲೂರಿನ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಹೈಸ್ಕೂಲ್ ವ್ಯಾಸಾಂಗ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಶುಕ್ರವಾರದಂದು ತಮ್ಮ ಮಗಳು ಸಂಬಂಧಿಕರ ಮನೆಗೆ ತೆರಳಿದ್ದು, ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇದ್ದರೆಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ.
ಪದ್ಮಾಕ್ಷಿ ಶನಿವಾರ ಬೆಳಿಗ್ಗೆ ತನ್ನ ಮನೆಯ ಮುಂಭಾಗದಲ್ಲಿ ಬಿದ್ದಿದ್ದು, ಅಕ್ಕಪಕ್ಕದ ಮನೆಯವರು ಗಮನಿಸಿ ಪರಿಶೀಲಿಸಿದಾಗ ಆಕೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಆಕೆಯ ಪತಿ ಚಂದ್ರು ಮನೆಯೊಳಗೆ ಮಲಗಿರುವುದು ಕಂಡುಬಂದಿತ್ತು. ಪತಿ ಚಂದ್ರು ಕುಡಿದ ಮತ್ತಿನಲ್ಲಿ ತನ್ನ ಪತ್ನಿಯನ್ನು ಕೊಡಲಿಯಿಂದ ಹೊಡೆದು ಮನೆಯಿಂದ ಹೊರಗೆ ತಳ್ಳಿದ್ದಾನೆ ಎನ್ನಲ್ಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಅನಧಿಕೃತ ಡಿಜಿಟಲ್ ಖಾತಾ ವಿತರಣೆ: ಚಿಟ್ಟಾ ಗ್ರಾಮ ಪಂಚಾಯಿತಿ ಪಿಡಿಒ ಅಮಾನತು
ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗೋಣಿಬೀಡು ಪೊಲೀಸರು ಪರಿಶೀಲನೆ ನಡೆಸಿದ್ದು, ಮನೆ ಹೊರಗೆ ಬಿದ್ದಿದ್ದ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಬಳಿಕ ಆರೋಪಿ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.





