ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳರಿಗೆ ಸಹಕಾರ ನೀಡುತ್ತಿದ್ದ ಆರೋಪದ ಮೇಲೆ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರನ್ನು ಬಂಧಿಸಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ.
ಮದ್ದೂರು ತಾಲೂಕಿನ ಕೊಪ್ಪ ಠಾಣೆಯ ಆರೋಪಿ ಕಾನ್ಸ್‌ಟೇಬಲ್ ಕೆಂಡಗಣ್ಣಯ್ಯ ಸೇರಿ ಒಟ್ಟು 8 ಮಂದಿ ಆರೋಪಿಗಳನ್ನು ಮದ್ದೂರು ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಂಡಗಣ್ಣಯ್ಯ ಜೊತೆಗೆ, ಖದೀಮರಾದ ಡಾಲಿ, ಭವನ್, ಸಾದನ್, ಅಯೂಬ್, ಮುನ್ನಾ, ಪ್ರಸಾದ್, ಫಯಾಜ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿ ಖದೀಮರಿಗೆ ಕಾನ್ಸ್‌ಟೇಬಲ್ ಸಹಾಯ ಮಾಡುತ್ತಿದ್ದರು. ಕಳ್ಳರು ಮನೆಗಳಲ್ಲಿ ಕದ್ದ ಚಿನ್ನಾಭರಣಗಳನ್ನು ಕಾನ್ಸ್‌ಟೇಬಲ್ ಗಿರವಿ ಇಟ್ಟುಕೊಡುತ್ತಿದ್ದರು. ತಾವೂ ಪಾಲು ಪಡೆಯುತ್ತಿದ್ದರು ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ, ಮದ್ದೂರಿನ ವೈದ್ಯ ಚಂದ್ರ ಎಂಬವರ ಮನೆಯಲ್ಲಿ ಕಳ್ಳತನವಾಗಿತ್ತು. ಕಳ್ಳರ ಬಂಧನಕ್ಕಾಗಿ ವಿಶೇಷ ತಂಡ ರಚಿಸಿದ್ದ ಪೊಲೀಸರು, ಕಾನ್ಸ್‌ಟೇಬಲ್ ಸೇರಿದಂತೆ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 1.486 ಕೆ.ಜಿ ಚಿನ್ನಾಭರಣೆ ಮತ್ತು 1.70 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ.




