ಮಂಡ್ಯ ನಗರದಲ್ಲಿ ವಾಸಿಸುತ್ತಿರುವ ಬಡವರಿಗೆ ನಿವೇಶನದ ಹಕ್ಕುಪತ್ರ ನೀಡುವುದು ಸೇರಿದಂತೆ ಮೂಲ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಸರ್‌ಎಂವಿ ಪ್ರತಿಮೆ ಬಳಿ ಸೇರಿದ ಕಾರ್ಯಕರ್ತರು ಘೋಷಣೆ ಕೂಗಿ, ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕುಮಾರ ಅವರಿಗೆ ಮನವಿ ಸಲ್ಲಿಸಿದರು.
“15 ವರ್ಷಗಳಿಂದ ನಗರದ ಬಡವರು ನಿವೇಶನಕ್ಕಾಗಿ ನಿರಂತರ ಹೋರಾಟ ಮಾಡುತ್ತ ಬಂದ ಪರಿಣಾಮ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡವಳಿಯಾಗಿವೆ. ಆದರೆ ನಡವಳಿಗಳು ನಡವಳಿಯಾಗಿಯೇ ಉಳಿದಿರುವುದು ದುರಂತ. ವಾಸಕ್ಕೆ ಮನೆ ಇಲ್ಲದ ಬಾಡಿಗೆ ಮನೆಗಳಲ್ಲಿ ಚಿಕ್ಕಿ ಚೋಪಡಿಯಲ್ಲಿ ವಾಸಿಸುತ್ತಿದ್ದು, ಬಾಡಿಗೆ ಕಟ್ಟುವುದರಲ್ಲೇ ಜೀವನ ಕಳೆಯುವಂತಾಗಿದೆ. ಮಳೆ ಬಂದರೆ ವಾಸಕ್ಕೆ ಯೋಗ್ಯವಲ್ಲದ ಅದೆಷ್ಟೋ ಮನೆಗಳಲ್ಲಿ ವಾಸ ಮಾಡುವ ದುಃಸ್ಥಿತಿ ಎದುರಾಗಿದೆ” ಎಂದು ಆರೋಪಿಸಿದರು.
“ಬೀಡಿ ಕಾಲೊನಿ, ಕೆರೆ ಅಂಗಳದಲ್ಲಿ ವಾಸಿಸುತ್ತಿರುವ ಬಡವರಿಗೂ ಹಕ್ಕುಪತ್ರ ನೀಡಬೇಕು. ಶಂಕರಮಠಕ್ಕೆ ಹೋಗುವ ರಸ್ತೆಯ ಬಲಭಾಗದಲ್ಲಿ ಹುಣಸೆ ಮರಗಳಿದ್ದು, ಈ ಮರಗಳ ಅಡಿಯಲ್ಲಿ 20 ಮನೆಗಳಿವೆ. ಮರದ ಬೇರುಗಳಿಂದ ಮನೆಗಳ ಗೋಡೆಗಳು ಬಿರುಕುಬಿಟ್ಟಿವೆ. ಬೇರೆ ಕಡೆ ನಿವೇಶನ ಕೊಡಿಸಿ ಅಥವಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಜನರ ಬದುಕು ಹಸನುಗೊಳಿಸಲು ಅಗತ್ಯ ಬೇಡಿಕೆ ಈಡೇರಿಸಬೇಕು: ಸಿಪಿಐಎಂ ಆಗ್ರಹ
“ವೃದ್ಧರು, ಅಂಗವಿಕಲರು, ವಿಧವೆಯರಿಗೆ ನೀಡುತ್ತಿರುವ ಮಾಸಾಶನವು ಸಮರ್ಪಕವಾಗಿ ಜಾರಿಯಾಗಬೇಕು. ಈಗ ಕೊಡುತ್ತಿರುವ ಮಾಸಾಶನ ಸಾಲುತ್ತಿಲ್ಲ. ಕನಿಷ್ಠ ತಿಂಗಳಿಗೆ ₹3,000 ನಿಗದಿಪಡಿಸಬೇಕು. ನಗರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸಬೇಕು. ಜತೆಗೆ ಮೂಲಸೌಲಭ್ಯ ಕಲ್ಪಿಸಬೇಕು. ಸಾಲ ಕೇಳಿ ಅರ್ಜಿ ಹಾಕಿದ ಎಲ್ಲ ಬಡವರಿಗೂ ಆರ್‌ಬಿಐ ನಿರ್ದೇಶನದಂತೆ ₹2 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಬೇಕು” ಎಂದು ಒತ್ತಾಯಿಸಿದರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ ಪುಟ್ಟಮಾದು, ಪ್ರಧಾನ ಕಾರ್ಯದರ್ಶಿ ಬಿ ಹನುಮೇಶ್, ಮುಖಂಡರಾದ ಸಿ ಕುಮಾರಿ, ಅಮಾಸಯ್ಯ, ಅಬ್ದುಲ್ಲಾ, ಬಾನು, ತಾಜ್, ನಸೀಮ, ಸುಮೇರಾ, ಶಾಕೀರಾ ಇದ್ದರು.
ತಂತ್ರಜ್ಞಾನದ ಗಗನಚುಂಬಿ ಕಟ್ಟಡಗಳ ನಡುವೆ ಒಂದು ಛಾವಣಿಗಾಗಿ, ತಮ್ಮ ಘನತೆಯ ಬದುಕಿಗಾಗಿ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ಇಂತಹ ಹೋರಾಟಗಳನ್ನು ಕಾಣಬಹುದು. ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದಿದ್ದು, ಎಐ ಕಾಲದಲ್ಲಿ ಬದುಕುತ್ತಿದ್ದೇವಾದರೂ ಬಹುತೇಕ ಕುಟುಂಬಗಳು ಇವತ್ತಿಗೂ ನಿವೇಶನ, ವಸತಿ, ಶಿಕ್ಷಣ ಸೇರಿದಂತೆ ಇತರೆ ಮೂಲ ಸೌಕರ್ಯಗಳಿಗಾಗಿ ಬೀದಿಯಲ್ಲಿ ಕೂತು ಸರ್ಕಾರಗಳನ್ನು ಕೇಳಬೇಕಾದ ಪರಿಸ್ಥಿತಿ ಬಂದೊದಗಿದೆ.
ದೇಶದ ಅತಿದೊಡ್ಡ ರಾಜಕೀಯ ಶಕ್ತಿಯೇ ಬಡಜನರು, ಕೂಲಿಕಾರ್ಮಿಕರು, ರೈತರು. ಆದರೆ ಸರ್ಕಾರ ಇವರ ಧ್ವನಿಯನ್ನು ಆಲಿಸದಿದ್ದರೆ ಚುನಾವಣೆಯಂತಹ ಸಂದರ್ಭದಲ್ಲಿ ರಾಜಕೀಯ ನಾಯಕರಿಗೆ ಸವಾಲುಗಳು ಎದುರಾಗಬಹುದು.





