ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತ ಮಂಜೇಗೌಡರಿಗೆ ಮಂಡ್ಯದ ವಿವಿಧ ಪ್ರಗತಿಪರ ಸಂಘಟನೆಗಳು ಬುಧವಾರ ಸಂಜೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಶ್ರದ್ಧಾಂಜಲಿ ಅರ್ಪಿಸಿ, ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಸಾಂಸ್ಕ್ರತಿಕ ಪ್ರತಿರೋಧ ವ್ಯಕ್ತಪಡಿಸಿದವು.
ಹುರುಗಲವಾಡಿ ರಾಮಯ್ಯ, ಗಾಮನಹಳ್ಳಿಸ್ವಾಮಿ ಮತ್ತು ತಂಡದವರಿಂದ ಹೋರಾಟದ ಗೀತೆಗಳನ್ನು ಹಾಡಿ ರೈತರ ತ್ಯಾಗವನ್ನು ಸ್ಮರಿಸಲಾಯಿತು. ಚಿತ್ರಕಲಾವಿದ ತೂಬಿನಕೆರೆ ಗೋವಿಂದು ಕುಂಚಗಳಲ್ಲಿ ರೈತರು ಪ್ರಸ್ತುತ ಪರಿಸ್ಥಿತಿಯನ್ನು ಬಿಂಬಿಸುವ ಚಿತ್ರಗಳನ್ನು ಬಿಡಿಸುವ ಮೂಲಕ ಗಮನ ಸೆಳೆದರು.
ಸದ್ದಾಂ ತಗ್ಗಹಳ್ಳಿ ಮತ್ತು ಶಿವಕುಮಾರ ಆರಾಧ್ಯ ಅವರು ರೈತನ ಬಗ್ಗೆ ಕವನಗಳನ್ನು ವಾಚನ ಮಾಡುವ ಮೂಲಕ ರೈತರ ಸಮಸ್ಯೆಗಳನ್ನು ತೆರೆದಿಟ್ಟರು.
ಕರುನಾಡು ಸೇವಕರು ಸಂಘಟನೆಯ ನಾಗಣ್ಣಗೌಡ ಮಾತನಾಡಿ, “ನಿನ್ನೆ ನಾವು ಪ್ರತಿಭಟನೆ ನಡೆಸಿದ ಫಲವಾಗಿ ಸರ್ಕಾರ ಎಚ್ಚೆತ್ತಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಚಿವರು ತೆರಳಿ ಮೃತ ರೈತನ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ್ದಾರೆ. ಇಷ್ಟಾದರೆ ಸಾಲದು ಪ್ರತಿ ಇಲಾಖೆಗಳಲ್ಲಿ ಇರುವ ಭ್ರಷ್ಟ ಅಧಿಕಾರಿಗಳಿಗೆ ಸರ್ಕಾರ ಎಚ್ಚರಿಕೆ ನೀಡಬೇಕು” ಎಂದು ಆಗ್ರಹಿಸಿದರು.
ನ್ಯಾಯವಾದಿ ಬಿ ಟಿ ವಿಶ್ವನಾಥ್ ಮಾತನಾಡಿ, “ಸರ್ಕಾರದ ಪ್ರತಿ ಇಲಾಖೆಗಳಲ್ಲಿ ರೈತ ವಿರೋಧಿ ಅಧಿಕಾರಿಗಳಿದ್ದರೆ, ಸರ್ಕಾರ ಅವಕಾಶ ನೀಡಿದರೆ ಅಂತಹ ಭ್ರಷ್ಟ ಅಧಿಕಾರಿಗಳ ಪಟ್ಟಿಯನ್ನು ಇಲ್ಲಿರುವ ಹಲವು ಸಂಘಟನೆಗಳ ಮುಖಂಡರು ಬಹಿರಂಗಪಡಿಸುತ್ತೇವೆ. ಅವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ” ಎಂದು ಎಚ್ಚರಿಸಿದರು.
ಜಾಗೃತ ಕರ್ನಾಟಕದ ಸಂಚಾಲಕ ಎನ್ ನಾಗೇಶ್, ಚೀರನಹಳ್ಳಿ ಲಕ್ಷ್ಮಣ್ ಸೇರಿದಂತೆ ಮತ್ತಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ಅರವಿಂದ ಪ್ರಭು, ಹೆಚ್ ಡಿ ಜಯರಾಂ, ಎಸ್ ನಾರಾಯಣ್, ನಾರಾಯಣಸ್ವಾಮಿ, ಹನುಮೇಶ್, ಜಾಗೃತ ಕರ್ನಾಟಕದ ಸಂಚಾಲಕ ನಗರಕೆರೆ ಜಗದೀಶ್, ಪೃಥ್ವಿರಾಜ್, ಸುಬ್ರಮಣ್ಯ, ಕೀಲಾರ ಕೃಷ್ಣೇಗೌಡ, ಸತ್ಯಮೂರ್ತಿ, ಸಂಜು ಆಲಕೆರೆ ಸೇರಿದಂತೆ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
ಘಟನೆ ಹಿನ್ನೆಲೆ
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ಉದ್ಯಾನದಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ಕೆ ಆರ್ ಪೇಟೆ ತಾಲೂಕು ಮೂಡನಹಳ್ಳಿ ಗ್ರಾಮದ ರೈತ ಮಂಜೇಗೌಡ ಎಂ ಡಿ(55) ಅವರು ಬುಧವಾರ ಬೆಳಿಗ್ಗೆ ಬೆಂಗಳೂರು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟರು.
“ಭೂಸ್ವಾಧೀನಗೊಂಡ ಜಮೀನಿಗೆ ಹಲವಾರು ವರ್ಷಗಳಿಂದ ಪರಿಹಾರ ಸಿಕ್ಕಿಲ್ಲ. ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ”ವೆಂದು ಆರೋಪಿಸಿ ಕೆ ಆರ್ ಪೇಟೆ ತಾಲೂಕು ಮೂಡನಹಳ್ಳಿ ಗ್ರಾಮದ ರೈತ ಮಂಜೇಗೌಡ ಎಂ ಡಿ(55) ಅವರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ಉದ್ಯಾನದಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಬಳಿಕ ಸಮೀಪದಲ್ಲಿದ್ದ ಸಾರ್ವಜನಿಕರು ಬೆಂಕಿ ನಂದಿಸಿ, ನಗರದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದರು. ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇಲ್ಲಿನ ವೈದ್ಯರು, ʼದೇಹವು ಶೇ.80ರಷ್ಟು ಸುಟ್ಟು ಹೋಗಿತ್ತುʼ ಎಂದು ತಿಳಿಸಿದ್ದರು. ರೈತ ಮಂಜೇಗೌಡ ಅವರು ಬುಧವಾರ ಬೆಳಿಗ್ಗೆ ಮೃತಪಟ್ಟರು.
ಈ ಹಿನ್ನೆಲೆಯಲ್ಲಿ ಘಟನೆ ಖಂಡಿಸಿ ಕನ್ನಡಪರ ಮತ್ತು ರೈತಪರ ಹೋರಾಟಗಾರರು ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರವೂ ಪ್ರತಿಭಟನೆ ನಡೆಸಿದ್ದು, “ಹೊತ್ತಿ ಉರಿದ ರೈತನಿಗೆ ನ್ಯಾಯ ಕೊಡಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ” ಎಂದು ಆಕ್ರೋಶ ಹೊರಹಾಕಿದ್ದರು. ರೈತ ಮಂಜೇಗೌಡ ಮೃತಪಟ್ಟ ಬಳಿಕವೂ ಬೃಹತ್ ಹೋರಾಟ ನಡೆಸಿದ್ದಾರೆ.
ಮೃತ ಮಂಜೇಗೌಡ ಕೆ ಆರ್ ಪೇಟೆ ತಾಲೂಕಿನ ಮಲ್ಲೇನಹಳ್ಳಿಯ ಸ.ನಂ 103 ಅರಣ್ಯ ಇಲಾಖೆಗೆ ಸೇರಿದ ಬೀಳುಬಿದ್ದಿದ್ದ ಜಾಗದಲ್ಲಿ ಕಲ್ಲುಗಳನ್ನು ತೆಗೆದು ವ್ಯವಾಸಯ ಮಾಡುತ್ತಿದ್ದರು. ಸದರಿ ಜಾಗ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ.ನಂ 103ರಲ್ಲಿ ವ್ಯವಸಾಯ ಮಾಡಬಾರದೆಂದು ತಿಳಿಸಿದ್ದರು.

ಮಂಜೇಗೌಡರು, ʼತಮ್ಮ ಕುಟುಂಬದಲ್ಲಿ 10 ಜನ ವಾಸವಾಗಿದ್ದು ಯಾವುದೇ ಜಮೀನು ಇರುವುದಿಲ್ಲʼವೆಂದು ಮನವಿ ಸಲ್ಲಿಸಿದ್ದರು. ಮಂಜೇಗೌಡ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 2014ರ ಆಗಸ್ಟ್ 14ರಂದು ₹3,50,000 ಬೆಳೆ ಸಾಲ ಪಡೆದಿದ್ದು, ಪ್ರಸ್ತುತ ₹7.79,613 ಬಾಕಿ ಪಾವತಿ ಮಾಡದೇ ಉಳಿಸಿಕೊಂಡಿದ್ದಾರೆಂದು ಕುಟುಂಬಸ್ಥರು ಸಚಿವರಿಗೆ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಬಲ ಬೆಲೆಗೆ ಕಬ್ಬು ಬೆಳೆಗಾರರ ಅನಿರ್ದಿಷ್ಟಾವಧಿ ಧರಣಿ: ನ.7ರಂದು ರಾಜ್ಯಾದ್ಯಂತ ಹೋರಾಟಕ್ಕೆ ರೈತರ ನಿರ್ಧಾರ
ನಂತರ ಮೃತ ರೈತನ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ಘೋಷಿಸಿರುವ ಸಚಿವ ಚೆಲುವರಾಯ ಸ್ವಾಮಿಯವರು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಹೆಚ್ಚುವರಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಮೃತ ರೈತನ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸದರಿ ಜಾಗವನ್ನು ಜಂಟಿ ಸರ್ವೆ ನಡೆಸಿ ಸ್ಥಳವೇನಾದರೂ ಅರಣ್ಯ ಇಲಾಖೆ ಒಡೆತನಕ್ಕೆ ಸೇರದಿದ್ದರೆ ಸದರಿ ಜಾಗವನ್ನು ಕುಟುಂಬಸ್ಥರಿಗೆ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.





