ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಮನುಸ್ಮೃತಿಯನ್ನು ದಹಿಸಿದ ಐತಿಹಾಸಿಕ ದಿನದ 98ನೇ ವರ್ಷಾಚರಣೆಯ ಅಂಗವಾಗಿ, ಮಂಡ್ಯ ನಗರದ ಸಂಜಯ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ಮತ್ತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದಸಂಸದ ಗುರುಪ್ರಸಾದ್ ಕೆರಗೋಡು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, “ಸಮಾಜದಲ್ಲಿ ತಲೆತಲಾಂತರಗಳಿಂದ ಶೂದ್ರ ಸಮುದಾಯ, ದಲಿತರು ಹಾಗೂ ಮಹಿಳೆಯರನ್ನು ಅಕ್ಷರ ಜ್ಞಾನದಿಂದ ವಂಚಿತರನ್ನಾಗಿಸಿ, ಅವರ ಮೇಲೆ ದೌರ್ಜನ್ಯ ಎಸಗಲು ಕಾರಣವಾಗಿದ್ದ ಮನುಸ್ಮೃತಿಯನ್ನು ಅಂಬೇಡ್ಕರ್ 1927ರ ಡಿಸೆಂಬರ್ 25ರಂದು ಸಾರ್ವಜನಿಕವಾಗಿ ಸುಟ್ಟು ಹಾಕಿದ್ದರು” ಎಂದು ಸ್ಮರಿಸಿದರು.
”ಆದರೆ ಇಂದು ಸಂವಿಧಾನ ವಿರೋಧಿ ಶಕ್ತಿಗಳು ಮತ್ತೆ ಪ್ರಬಲವಾಗುತ್ತಿವೆ. ಅಂಬೇಡ್ಕರ್ ರೂಪಿಸಿದ ಸಮಾನತೆಯ ಸಂವಿಧಾನದ ಬದಲಿಗೆ ಮನುಸ್ಮೃತಿಯ ಆಶಯಗಳನ್ನು ಜಾರಿಗೆ ತರಲು ವ್ಯವಸ್ಥಿತ ಸಂಚು ನಡೆಯುತ್ತಿದೆ. ಇದನ್ನು ಪ್ರತಿಭಟಿಸಲು ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ನಾವು ಸಂಕೇತಿಕವಾಗಿ ಮನುಸ್ಮೃತಿಯ ಪ್ರತಿಗಳನ್ನು ಸುಡುವ ಮೂಲಕ ಹೋರಾಟ ಮುಂದುವರಿಸುತ್ತಿದ್ದೇವೆ” ಎಂದು ಗುಡುಗಿದರು.


ಮಹಿಳಾ ಮುನ್ನಡೆಯ ಪೂರ್ಣಿಮಾ ಮಾತನಾಡಿ, “ಇಂದಿಗೂ ಸಮಾಜದಲ್ಲಿ ಜಾತಿ ತಾರತಮ್ಯ ಮತ್ತು ಲಿಂಗ ಅಸಮಾನತೆ ಜೀವಂತವಾಗಿದೆ. ಅನ್ಯ ಜಾತಿಯವನನ್ನು ಪ್ರೀತಿಸಿ ಮದುವೆಯಾದ ಗರ್ಭಿಣಿ ಮಗಳನ್ನು ತಂದೆಯೇ ಕೊಚ್ಚಿ ಕೊಲೆ ಮಾಡಿದ ಹುಬ್ಬಳ್ಳಿ ಘಟನೆ, ಮನುಸ್ಮೃತಿಯ ವಿಷಬೀಜ ಜನರ ತಲೆಯಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿ. ”ಮಹಿಳೆಯರ ಮೇಲೆ ನಿರಂತರ ಅತ್ಯಾಚಾರಗಳು ನಡೆಯುತ್ತಿದ್ದರೂ, ಅಪರಾಧಿಗಳು ಸುಲಭವಾಗಿ ಬಿಡುಗಡೆಯಾಗುತ್ತಿದ್ದಾರೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿ ಮತ್ತು ಅಧಿಕಾರಿಗಳ ತಲೆಯಿಂದ ಈ ಮನುಸಿದ್ದಾಂತ ಹೊರಹೋಗುವವರೆಗೂ ಮಹಿಳೆಯರಿಗೆ ಮತ್ತು ಶೋಷಿತರಿಗೆ ನಿಜವಾದ ನ್ಯಾಯ ಸಿಗಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಮಂಡ್ಯ | ರೈತರು ಸಮಗ್ರ ಕೃಷಿ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಬೇಕು: ಸಿಎಂ ಸಿದ್ದರಾಮಯ್ಯ
ಈ ಸಂದರ್ಭದಲ್ಲಿ ಕರ್ನಾಟಕ ಜನಶಕ್ತಿಯ ಸಿದ್ದರಾಜು ಹಾಗೂ ಜಗದೀಶ್ ನಗರಕೆರೆ, ಮಹಿಳಾ ಮುನ್ನಡೆಯ ಶಿಲ್ಪ, ಅಂಜಲಿ, ಶೈಲಜಾ, ಕೌಶಲ್ಯ ಮತ್ತು ಪ್ರಿಯಾಂಕ ಉಪಸ್ಥಿತರಿದ್ದರು. ಅಲ್ಲದೆ ರೈತ ಸಂಘದ ಪಾಂಡು ಶ್ರೀರಂಗಪಟ್ಟಣ, ದಸಂಸದ ರವಿಚಂದ್ರ ಗಂಜಾಂ, ವಿಜಯ್ ಪಾಂಡವಪುರ, ಕಲಾವಿದರಾದ ಹುರಗಲವಾಡಿ ರಾಮಯ್ಯ ಹಾಗೂ ಮಂಜುಳ ಆಲದಹಳ್ಳಿ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡು ಸಂವಿಧಾನದ ರಕ್ಷಣೆಗಾಗಿ ಘೋಷಣೆಗಳನ್ನು ಕೂಗಿದರು.





