ಮಂಡ್ಯ ಜಿಲ್ಲೆಯ ಇಂಡುವಾಳು ಗ್ರಾಮ ಪಂಚಾಯತಿಯಲ್ಲಿ1,281 ಕಡತ ನಾಪತ್ತೆ ಮತ್ತು 1,881 ಅಕ್ರಮ ಇ-ಖಾತೆ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪಿಡಿಒಗಳು ಸೇರಿ ನಾಲ್ವರು ಅಧಿಕಾರಿಗಳು ಅಮಾನತುಗೊಳಿಸಲಾಗಿದೆ. ನಾಲ್ವರನ್ನೂ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಅಮಾನತು ಮಾಡಿರುವುದಾಗಿ ಮಂಡ್ಯ ಜಿಲ್ಲಾ ಪಂಚಾಯತಿ ಸಿಇಓ ಕೆ.ಆರ್ ನಂದಿನಿ ತಿಳಿಸಿದ್ದಾರೆ.
ಈ ಹಿಂದೆ ಇಂಡುವಾಳು ಗ್ರಾಮ ಪಂಚಾಯತಿಯ ಪಿಡಿಒ ಆಗಿದ್ದ ಸಿದ್ಧರಾಜು, ಹಾಲಿ ಪಿಡಿಒ ದಯಾನಂದ, ಕಾರ್ಯದರ್ಶಿ ಮರಿಲಿಂಗಯ್ಯ ಹಾಗೂ ದ್ವಿತೀಯ ದರ್ಜೆ ಸಹಾಯಕಿ ರಾಣಿ – ಅಮಾನತುಗೊಂಡ ಅಧಿಕಾರಿಗಳು. ಈ ನಾಲ್ವರ ವಿರುದ್ಧ ತನಿಖೆ ನಡೆಸಲಾಇದ್ದು, ನಾಲ್ವರೂ ಇ-ಸ್ವತ್ತು ನಮೂನೆ 9/11ಎ ವಿತರಿಸುವಲ್ಲಿ ಕರ್ತವ್ಯಲೋಪ ಎಸಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.
ನಾಲ್ವರ ಅಮಾನತಿಗೂ ಮುನ್ನವೇ, ಈ ಹಿಂದೆ ಇಂಡುವಾಳು ಗ್ರಾಮ ಪಂಚಾಯತಿಯಲ್ಲಿ ಪಿಡಿಒಗಳಾಗಿ ಕೆಲಸ ಮಾಡಿದ್ದ ಯೋಗೇಶ್ ಮತ್ತು ವಿಶಾಲಮೂರ್ತಿ ಎಂಬುವರನ್ನೂ ಅಮಾನತು ಮಾಡಲಾಗಿತ್ತು. ಮತ್ತೊಬ್ಬ ಪಿಡಿಒ ಬಿ.ವಿ ಸೋಮು ಎಂಬವರು ನಿವೃತ್ತರಾಗಿದ್ದಾರೆ. ಈ ಎಲ್ಲರ ವಿರುದ್ಧವೂ ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.





