ಕನ್ನಡ ಕೇವಲ ಒಂದು ಭಾಷೆಯಲ್ಲ, ಅದು ನಮ್ಮ ಜೀವನದ ಸಂಸ್ಕೃತಿ. ಕನ್ನಡ ಪುಸ್ತಕಗಳನ್ನು ಓದುವುದರಿಂದ ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಜ್ಞಾನಾಭಿವೃದ್ಧಿಯಾಗುವುದಲ್ಲದೆ ಜೀವನೋತ್ಸಾಹ ಮೂಡುತ್ತದೆ ಎಂದು ಖ್ಯಾತ ಸಾಹಿತಿ ಹಾಗೂ ಸಂಘಟಕ ಸತೀಶ್ ಜವರೇಗೌಡ ಅಭಿಮತ ವ್ಯಕ್ತಪಡಿಸಿದರು.
ಮಂಡ್ಯದ ಕೃಷ್ಣರಾಜಪೇಟೆ ಪಟ್ಟಣದ ಸ್ಕೂಲ್ ಆಫ್ ಇಂಡಿಯಾ ಶಾಲೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಲೇಖಕಿ, ಕವಿಯತ್ರಿ ಬಿ ಆರ್ ಅನಿತಾ ಚೇತನ್ ಬಾರ್ಗಲ್ ಅವರು ರಚಿಸಿರುವ ಮೂರು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
“ನಮ್ಮ ಪರಿಸರ ಸೇರಿದಂತೆ, ಸುತ್ತ ಮುತ್ತಲಿನ ವಾತಾವರಣಗಳು, ನಮ್ಮ ಜೀವನದಲ್ಲಿ ನಡೆಯುವ ಘಟನೆಗಳು ಉತ್ತಮವಾದ ಕವನದ ರಚನೆಗೆ ಪ್ರೋತ್ಸಾಹದಾಯಕವಾಗುತ್ತದೆ. ಹೊಸದಾಗಿ ಕವನಗಳನ್ನು ರಚಿಸುವವರು ಒಮ್ಮೆ ಕವಿತೆ ಬರೆಯುವ ಮುನ್ನ ಹತ್ತಾರು ಬಾರಿ ಆಲೋಚಿಸಿ ಅವಲೋಕನ ನಡೆಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಕವಿತೆಗಳನ್ನು ರಚಿಸಲು ಮುಂದಾದರೆ ಆ ಕವಿತೆ ಹೆಚ್ಚು ಅರ್ಥವನ್ನು ಪಡೆಯುವುದಲ್ಲದೆ ಓದುಗರ ಮನಸ್ಸನ್ನು ಕೂಡ ಗೆಲ್ಲುವ ಸಾಮರ್ಥ್ಯವನ್ನು ಪಡೆಯುತ್ತದೆ” ಎಂದು ತಿಳಿಸಿದರು.


“ಜಾಗತಿಕ ಜಗತ್ತಿನ ಹಿಂದಿನ ಸ್ಪರ್ಧಾ ಪ್ರಪಂಚದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಆಂಗ್ಲ ಭಾಷೆಯನ್ನು ಕಲಿಯುವಂತೆ ಒತ್ತಡವನ್ನು ಹೇರದೆ ನಮ್ಮ ತಾಯಿ ಭಾಷೆಯಾಗಿರುವ ಕನ್ನಡವನ್ನು ಕಲಿತು ಪಾಠ ಪ್ರವಚನಗಳನ್ನು ಓದುವುದು ಬರೆಯುವುದು ಸೇರಿದಂತೆ ಸ್ಪಷ್ಟವಾಗಿ ಮಾತನಾಡುವುದನ್ನು ಕಲಿಯುವಂತೆ ಉತ್ತೇಜನ ನೀಡಬೇಕು. ನಾವು ತೋರಿಕೆಗಾಗಿ ಕೇವಲ ಕನ್ನಡ ಭಾಷೆಯನ್ನು ಕಲಿಯಲು ಮುಂದಾಗದೆ ನಮ್ಮ ಜೀವನದ ಒಂದು ಭಾಗವಾಗಿ ನಮ್ಮ ಜೀವನೋತ್ಸಾಹಕ್ಕೆ ಪ್ರೇರಕ ಶಕ್ತಿಯಾಗಿರುವ ಕನ್ನಡ ಭಾಷೆಯನ್ನು ಪ್ರೀತಿಸಿ ಗೌರವಿಸುವ ಮೂಲಕ ಕನ್ನಡ ಭಾಷೆ ಗೊತ್ತಿಲ್ಲದ ಅನ್ಯ ಭಾಷಿಕರಿಗೆ ಕನ್ನಡ ಭಾಷೆಯನ್ನು ಕಲಿಸಲು ಮುಂದಾದಾಗ ಮಾತ್ರ ಕನ್ನಡ ಭಾಷೆಯು ನಮ್ಮ ರಾಜ್ಯ ದೇಶ ಸೇರಿದಂತೆ ಪ್ರಪಂಚದಲ್ಲಿ ಜೀವಂತವಾಗಿ ಶಾಶ್ವತವಾಗಿ ಉಳಿಯುತ್ತದೆ” ಎಂದರು.
ವಿಶ್ರಾಂತ ಪ್ರಾಂಶುಪಾಲರು ಹಾಗೂ ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಕುಮಾರಸ್ವಾಮಿ ಅವರು ಮಾತನಾಡಿ, “ಸ್ಕೂಲ್ ಆಫ್ ಇಂಡಿಯಾ ಶಾಲೆಯು ಆಂಗ್ಲ ಮಾಧ್ಯಮ ಶಾಲೆಯಾದರೂ ಕೂಡ ತನ್ನ ಕನ್ನಡತನವನ್ನು ಮಾತ್ರ ಎಂದಿಗೂ ಬಿಟ್ಟು ಕೊಟ್ಟಿಲ್ಲ. ಶಾಲೆಯಲ್ಲಿ ಇಂದು ಕನ್ನಡದ ಜಾತ್ರೆಯ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ ಅರ್ಥಪೂರ್ಣವಾಗಿ ನಡೆಯುತ್ತಿದೆ” ಎಂದರು.
ಇದನ್ನೂ ಓದಿ: ಮಂಡ್ಯ | ಅಸಂಘಟಿತ ಕಾರ್ಮಿಕರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ: ಸಚಿವ ಸಂತೋಷ್ ಲಾಡ್
ಬ್ರಿಟೀಷರಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಹೋರಾಡಿ ವೀರ ಮರಣವನ್ನು ಅನುಭವಿಸಿದ ವಿವಿಧ ಮಹನೀಯರಾದ ಕಿತ್ತೂರರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಮಹಾತ್ಮ ಗಾಂಧೀಜಿ, ಒನಕೆ ಓಬವ್ವ, ಪಂಡಿತ್ ಜವಾಹರಲಾಲ್ ನೆಹರು, ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಸೇರಿದಂತೆ ವಿವಿಧ ಮಹನೀಯರ ವೇಷ ಭೂಷಣಗಳನ್ನು ತೊಟ್ಟ ಪುಟಾಣಿಗಳು ಏಕಪಾತ್ರ ಅಭಿನಯ ನಡೆಸುವ ಮೂಲಕ ಅತಿಥಿಗಳು ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರರಾದರು.
ಕೆ ಆರ್ ಪೇಟೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾನಿಲಯದ ಶಾಖೆಯ ವ್ಯವಸ್ಥಾಪಕಿ ಸವಿತಕ್ಕ, ಪುರಸಭೆ ಮಾಜಿ ಸದಸ್ಯ ಕೆ ಆರ್ ನೀಲಕಂಠ, ಕವಿಯತ್ರಿ ಅನಿತಾ ಚೇತನ ಭಾರ್ಗಲ್, ಶಾಲೆಯ ಮುಖ್ಯ ಶಿಕ್ಷಕಿ ಶೈನಿ ಮೇರಿ ಡಯಾಸ್, ಶಿಕ್ಷಣ ಪ್ರೇಮಿಗಳಾದ ಕೆ ಎಸ್ ನಾಗೇಶ್ ಬಾಬು, ವಿಶ್ರಾಂತ ಇಂಜಿನಿಯರ್ ಕಾಳಯ್ಯ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





