ಯುವತಿಯ ಪೋಷಕರ ವಿರೋಧದ ನಡುವೆಯೂ ಪ್ರೇಮ ವಿವಾಹವಾಗಿದ್ದ ಕಾರಣಕ್ಕೆ, ಯುವಕನ ಮನೆಗೆ ಯುವತಿಯ ತಂದೆ ಬೆಂಕಿ ಹಚ್ಚಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮದ್ದೂರು ತಾಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ವಿನೋದ್ ಮತ್ತು ಕಾವ್ಯ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅವರ ಪ್ರೀತಿಯನ್ನು ಕಾವ್ಯ ತಂದೆ ಚನ್ನೇಗೌಡ ವಿರೋಧಿಸಿದ್ದರು. ಆದರೂ, ಗುರುವಾರ, ಕಾವ್ಯ- ವಿನೋದ್ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.
ತಮ್ಮ ವಿರೋಧದ ನಡುವೆಯೂ ಕಾವ್ಯ ಅವರು ವಿನೋದ್ ಅವರನ್ನು ವಿವಾಹವಾಗಿದ್ದಕ್ಕೆ ಚನ್ನೇಗೌಡ ಕೋಪಗೊಂಡಿದ್ದರು. ಕೋಪದಿಂದಲೇ, ವಿನೋದ್ ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ.
ಅವರು ಬೆಂಕಿ ಹಚ್ಚಿದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ, ಯಾರಿಗೂ ಅಪಾಯವಾಗಿಲ್ಲ. ಆದರೆ, ಮನೆ ಸಹಿತ ಮನೆಯಲ್ಲಿದ್ದ ಎಲ್ಲ ಸಾಮಗ್ರಿಗಳು ಸುಟ್ಟುಹೋಗಿವೆ. ಗ್ರಾಮಸ್ಥರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.
ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




