ಸ್ಥಳೀಯ ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ಸುಮಾರು 19 ಎಕರೆ ಅಮೂಲ್ಯ ಭೂಮಿಯನ್ನು ತಮಿಳು ಕಾಲೋನಿ ನಿವಾಸಿಗಳು ಸೇರಿದಂತೆ ಹಲವರು ಒತ್ತುವರಿ ಮಾಡಿಕೊಂಡಿದ್ದು, ಈ ಒತ್ತುವರಿಯನ್ನು ತೆರವುಗೊಳಿಸಲು ಹೈಕೋರ್ಟ್ ಅಡ್ವೊಕೇಟ್ ಜನರಲ್ ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡರ ಬಣ) ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಕೊಡುವ ಮೂಲಕ ಒತ್ತಾಯಿಸಿದೆ.
ಮೆಡಿಕಲ್ ಕಾಲೇಜಿಗೆ ಸೇರಿದ 19 ಎಕರೆ ಜಾಗದಲ್ಲಿ ಹಲವರು ಒತ್ತುವರಿ ಮಾಡಿಕೊಂಡಿದ್ದು, ಈ ಕುರಿತು ರಾಜ್ಯ ಹೈಕೋರ್ಟ್‌ನ ದ್ವಿಸದಸ್ಯ ಪೀಠವು ಒತ್ತುವರಿ ತೆರವುಗೊಳಿಸುವಂತೆ ಹತ್ತು ವರ್ಷಗಳ ಹಿಂದೆಯೇ ಆದೇಶ ನೀಡಿದೆ (WP 15637). ಆದರೆ, ತಮಿಳು ಕಾಲೋನಿ ನಿವಾಸಿಗಳು ಹೈಕೋರ್ಟ್‌ನ ಏಕಸದಸ್ಯ ಪೀಠದ ಮುಂದೆ ಹೊಸ ಪ್ರಕರಣ ದಾಖಲಿಸಿ (WP 18622/2023), ತೆರವುಗೊಳಿಸದಂತೆ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ. ಈ ತಡೆಯಾಜ್ಞೆಯನ್ನು ತೆರವುಗೊಳಿಸುವಲ್ಲಿ ಆಡಳಿತ ವ್ಯವಸ್ಥೆಯು ವಿಫಲವಾಗಿದೆ ಎಂದು ವೇದಿಕೆ ಆರೋಪಿಸಿದೆ.
ಕಾಲೇಜಿನ ಆವರಣದಲ್ಲಿ ಭೂಮಿ ಲಭ್ಯವಿಲ್ಲದ ಕಾರಣ ರಾಷ್ಟ್ರೀಯ ಮೆಡಿಕಲ್ ಕೌನ್ಸಿಲ್ (NMC) ಹೆಚ್ಚುವರಿಯಾಗಿ ನೀಡಬೇಕಿದ್ದ 50 ಮೆಡಿಕಲ್ ಸೀಟುಗಳನ್ನು ನಿರಾಕರಿಸಿದೆ. ಒತ್ತುವರಿಯಿಂದಾಗಿ ಮೆಡಿಕಲ್ ಕಾಲೇಜಿನ ಶೈಕ್ಷಣಿಕ ವಾತಾವರಣವು ದಿನೇ ದಿನೇ ಹದಗೆಡುತ್ತಿದೆ.
ಇದನ್ನೂ ಓದಿ: ಕೆ.ಆರ್.ಪೇಟೆ | ₹26.36 ಲಕ್ಷ ಹಣಕಾಸು ಅಕ್ರಮ; ಮಂದಗೆರೆ ಪಿಡಿಒ ಅಮಾನತು
ವ್ಯವಸ್ಥಿತವಾಗಿ ಹೋರಾಟ ನಡೆಸಿದರೆ ಮಾತ್ರ ಈ ಅಮೂಲ್ಯ ಭೂಮಿಯನ್ನು ಕಾಲೇಜಿನ ಶ್ರೇಯೋಭಿವೃದ್ಧಿಗಾಗಿ ಉಳಿಸಿಕೊಳ್ಳಲು ಸಾಧ್ಯವಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಈ ಕೂಡಲೇ ಅಡ್ವೊಕೇಟ್ ಜನರಲ್ ಅವರು ನ್ಯಾಯಾಲಯದಲ್ಲಿ ಮಧ್ಯಪ್ರವೇಶಿಸಿ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ವಹಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಕೆ ಬಿ ಜಯರಾಮು ಹಾಗೂ ಪದಾಧಿಕಾರಿಗಳು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯಸ್ವಾಮಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭಗಳಲ್ಲಿ ವೇದಿಕೆಯ ಪದಾಧಿಕಾರಿಗಳಾದ ಎನ್ ರಾಜೇಂದ್ರ, ಗೋವಿಂದೇಗೌಡ, ಪುನೀತ್ ಬಿ ಸಿ, ವೆಂಕಟೇಗೌಡ, ಸಿ ಮುದ್ದೇಗೌಡ, ಸೋಮಶೇಖರ್ ಇನ್ನೂ ಮುಂತಾದವರು ಹಾಜರಿದ್ದರು.





