ಮೈಸೂರು ನಗರವನ್ನು ಮತ್ತೆ ದೇಶದ ನಂ.1 ಸ್ವಚ್ಛತ ನಗರಿ ಮಾಡುವ ಸ್ವಚ್ಛತಾ ಅಭಿಯಾನಕ್ಕೆ ಮಂಡ್ಯ ರಮೇಶ್ ರಾಯಭಾರಿಯಾಗಿದ್ದಾರೆ. ರಾಯಭಾರಿಯಾಗುವಂತೆ ಮೈಸೂರು ಮಹಾನಗರ ಪಾಲಿಕೆ ನೀಡಿದ್ದ ಆಹ್ವಾನವನ್ನು ಮಂಡ್ಯ ರಮೇಶ್ ಒಪ್ಪಿಕೊಂಡಿದ್ದಾರೆ.
2015 ಮತ್ತು 2016ರಲ್ಲಿ ಸತತ ಎರಡು ಬಾರಿ ಮೈಸೂರು ನಗರವು ದೇಶದ ನಂ.1 ಸ್ವಚ್ಛ ನಗರಿ ಎಂಬ ಹಿರಿಮೆಯನ್ನು ಗಳಿಸಿತ್ತು. ಕಳದ ಆರೇಳು ವರ್ಷಗಳಿಂದ ಮತ್ತೆ ಆ ಹಿರಿಮೆ ಪಡೆಯಲು ಪಾಲಿಕೆ ಯತ್ನಿಸುತ್ತಿದ್ದರೂ ಸಾಧ್ಯವಾಗಿಲ್ಲ. ಅಲ್ಲದೆ, 2021ರಲ್ಲಿ ಸ್ವಚ್ಛ ನಗರಗಳ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಈ ವರ್ಷ ಸ್ವಚ್ಛತಾ ಅಭಿಯಾನ ನಡೆಸಲು ಮುಂದಾಗಿದೆ. ಅದಕ್ಕೆ ರಾಯಭಾರಿಯಾಗಿ ಮಂಡ್ಯ ರಮೇಶ್ ಅವರನ್ನು ಆಯ್ಕೆ ಮಾಡಿದೆ.
ಪಾಲಿಕೆಯ ಆಹ್ವಾನವನ್ನು ಒಪ್ಪಿಕೊಂಡಿರುವ ಮಂಡ್ಯ ರಮೇಶ್, ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. “ಮೈಸೂರು ನಮ್ಮೆಲ್ಲರಿಗೂ ಇಷ್ಟದ ನಗರ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಮೈಸೂರಿನ ಹೆಸರು ಹೇಳಿದರೆ, ಹುಬ್ಬೇರಿಸುತ್ತಾರೆ. ಎಲ್ಲರೂ ಮೈಸೂರು ನಗರವನ್ನು ಸ್ವಚ್ಛ ನಗರವಾಗಿಸಲು ಭಾಗಿಯಾಗಬೇಕು” ಎಂದು ಅವರು ಹೇಳಿದ್ದಾರೆ.




