ಲಿಂಗಾನುಪಾತದಲ್ಲಿ ಮಂಡ್ಯವು ಅತೀ ಹಿಂದುಳಿದಿದೆ. ಮಂಡ್ಯದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ಭಾರೀ ವ್ಯತ್ಯಾಸವಿದೆ ಎಂಬುದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್‌ಸಿಪಿಸಿಆರ್) ಬಿಡುಗಡೆ ಮಾಡಿರುವ ವರದಿಯಿಂದ ಬಹಿರಂಗವಾಗಿದೆ. 2023ನೇ ವರ್ಷಕ್ಕೆ ಸಂಬಂಧಿಸಿದ ಅಂಕಿಅಂಶದಲ್ಲಿ ಜಿಲ್ಲೆಯಲ್ಲಿ 1,000 ಪುರುಷರಿಗೆ 887 ಮಹಿಳೆಯರಿದ್ದಾರೆ ಎಂದು ವರದಿ ವಿವರಿಸಿದೆ.
ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ಎಸ್ ಮಾದೇಶ್ವರನ್ ಮತ್ತು ಬಿಪಿ ವಾಣಿ ಅವರು ಕರ್ನಾಟಕದಲ್ಲಿ ಲಿಂಗಾನುಪಾತದ ಅಧ್ಯಯನ ನಡೆಸಿದ್ದಾರೆ. ಅವರ ಅಧ್ಯಯನ ವರದಿಯನ್ನು ಕೆಎಸ್‌ಸಿಪಿಸಿಆರ್ ಬಿಡುಗಡೆ ಮಾಡಿದೆ. “ಮಂಡ್ಯ, ಬಾಗಲಕೋಟೆ, ಬೀದರ್, ಚಿಕ್ಕಬಳ್ಳಾಪುರ ಹಾಗೂ ಕಲಬುರಗಿ ಸೇರಿದಂತೆ ಹಲವಾರು ಜಿಲ್ಲೆಗಳು ಕಡಿಮೆ ಲಿಂಗಾನುಪಾತವನ್ನು ಹೊಂದಿವೆ. ಈ ಜಿಲ್ಲೆಗಳು ಜನನದ ಸಮಯದಲ್ಲಿ 900ಕ್ಕಿಂತ ಕಡಿಮೆ ಲಿಂಗಾನುಪಾತವನ್ನು ಹೊಂದಿರುವ ಜಿಲ್ಲೆಗಳಾಗಿವೆ” ಎಂದು ವರದಿ ಹೇಳಿದೆ.
ಮಂಡ್ಯ ಜಿಲ್ಲೆಯಲ್ಲಿ 2023ರಲ್ಲಿ ಲಿಂಗಾನುಪಾತವು 887 ಆಗಿತ್ತು. ಅದಕ್ಕೂ ಹಿಂದಿನ – 2020ರಲ್ಲಿ 884, 2021ರಲ್ಲಿ 873 ಹಾಗೂ 2022ರಲ್ಲಿ 877 ಆಗಿತ್ತು ಎಂಬುದನ್ನು ವರದಿ ವಿವರಿಸಿದೆ.
“2023ರಲ್ಲಿ ಬಾಗಲಕೋಟೆ 919, ಬೀದರ್ 920, ಕಲಬುರಗಿ 910 ಹಾಗೂ ಚಿಕ್ಕಬಳ್ಳಾಪುರ 937 ಲಿಂಗಾನುಪಾತವನ್ನು ಹೊಂದಿವೆ. ಈ ಜಿಲ್ಲೆಗಳಲ್ಲಿಯೂ 2022ರಲ್ಲಿ ಲಿಂಗಾನುಪಾತವು 900ಕ್ಕಿಂತ ಕಡಿಮೆಯಾಗಿತ್ತು” ಎಂದು ವರದಿ ತಿಳಿಸಿದೆ.
ಭಾರತದ ಲಿಂಗಾನುಪಾತವು ಜನನದ ಸಮಯದಲ್ಲಿ 1,000 ಪುರುಷರಿಗೆ 950 ಮಹಿಳೆಯರನ್ನು ಹೊಂದಿರಬೇಕೆಂಬ ಗುರಿಯನ್ನು ಹೊಂದಿದೆ. ಆದಾಗ್ಯೂ, ಈ ಪ್ರಮಾಣದ ಲಿಂಗಾನುಪಾತವನ್ನು ಸಾಧಿಸಲಾಗಿಲ್ಲ. ಕೇರಳ ಮಾತ್ರವೇ ಲಿಂಗಾನುಪಾತದಲ್ಲಿ ಪ್ರಗತಿ ಸಾಧಿಸಿದೆ. ಅಲ್ಲಿ, 1,000 ಪುರುಷರಿಗೆ 1,080 ಮಹಿಳೆಯರಿದ್ದಾರೆ.
ಲಿಂಗಾನುಪಾತದಲ್ಲಿನ ಭಾರೀ ವ್ಯತ್ಯಾಸಕ್ಕೆ ಹೆಣ್ಣು ಭ್ರೂಣ ಹತ್ಯೆ ಪ್ರಮುಖ ಕಾರಣವೆಂದು ಹೇಳಲಾಗಿದೆ. ಇತ್ತೀಚೆಗೆ, ಮಂಡ್ಯದಲ್ಲಿ ಹೆಣ್ಣು ಭ್ರೂಣ ಪತ್ತೆಯ ಜಾಲ ಬೆಳಕಿಗೆ ಬಂದಿತ್ತು. ಇಂತಹ ಜಾಲಗಳಿಂದ ಹೆಣ್ಣು ಭ್ರೂಣ ಹತ್ಯೆಗಳು ಹೆಚ್ಚಾಗಿ ನಡೆದಿವೆ ಎಂದು ಹೇಳಲಾಗಿದೆ.




