ಮಂಡ್ಯ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರೀ ಹಾನಿ ಸಂಭವಿಸಿದೆ. ಒಂದೆಡೆ ನಾಲೆಗಳು ಒಡೆದು ಹೊಲಗಳಿಗೆ ನೀರು ನುಗ್ಗಿದ್ದು, ನೂರಾರು ಎಕರೆ ಕೃಷಿ ಜಮೀನು ಜಲಾವೃತಗೊಂಡಿವೆ. ಪರಿಣಾಮವಾಗಿ ಸಾಕಷ್ಟು ಪ್ರಮಾಣದ ಬೆಳೆಗಳು ನೀರುಪಾಲಾಗಿವೆ. ಅಲ್ಲಲ್ಲಿ ಮನೆಗಳು ಕುಸಿದು ಬಿದ್ದಿರುವ ಉದಾಹರಣೆಗಳೂ ಇವೆ. ಬಡಾವಣೆ, ಕಾಲೋನಿಗಳಿಗೆ ನೀರು ನುಗ್ಗಿ ಓಡಾಡಲು ಕಷ್ಟವಾಗುವಷ್ಟು ಅವಾಂತರ ಸೃಷ್ಟಿಯಾಗಿದೆ.
ಮಂಡ್ಯ ನಗರದ ಕೆ ಹೆಚ್ ಬಿ ಕಾಲೋನಿಯಲ್ಲಿ ಸುಮಾರು 30 ಮನೆಗಳು ಜಲಾವೃತವಾಗಿದ್ದು, ಹೊರ ಹೋಗಲಾರದಂತೆ ನೀರು ನಿಂತಿದೆ. ನಿರಂತರವಾಗಿ ರಾತ್ರಿಯಿಡೀ ಸುರಿದ ಮಳೆಗೆ ಕಾಲೋನಿ ರಸ್ತೆಗಳು ಮುಳುಗಿವೆ. ಬೀಡಿ ಕಾರ್ಮಿಕರ ಕಾಲೋನಿ, ವಿವೇಕಾನಂದ ನಗರ, ಕೆ.ಹೆಚ್.ಬಿ ಕಾಲೋನಿಗಳು ಜೋರು ಮಳೆಗೆ ನಲುಗಿವೆ.

ಜಲಾವೃತದಿಂದ ಸಮಸ್ಯೆಯಾಗಿದ್ದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಮತ್ತು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಗಾಣಿಗ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಇಪ್ಪತ್ತು ವರ್ಷಗಳಿಂದ ಇಲ್ಲಿ ಬದುಕು ನಡೆಸುತ್ತಿರುವ ಸಾರ್ವಜನಿಕರೇ ಹೇಳುವಂತೆ ಮೊದಲು ಇಲ್ಲಿ ಮಳೆ ಬಂದರೆ ಸ್ಥಳೀಯರೆಲ್ಲ ಒಂದು ವಾರ ಕಾಲೋನಿ ಬಿಡುವ ಸಂದರ್ಭ ಎದುರಾಗುತ್ತಿತ್ತು. ₹20 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗಿ ದೊಡ್ಡ ಸಮಸ್ಯೆ ಇಲ್ಲದಂತೆ ಆಗಿದೆ. ಆದರೂ ತೀವ್ರ ಮಳೆಯಿಂದ ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಂತು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಪ್ರಸ್ತುತ ಹರಿದು ಬರುತ್ತಿರುವ ಹೆಚ್ಚುವರಿ ನೀರನ್ನು ತಡೆಗಟ್ಟಲು ಸುಮಾರು ಎರಡೂವರೆ ಕಿ.ಮೀ ಸೇತುವೆ ನಿರ್ಮಾಣ ಮಾಡಲು ಈಗಾಗಲೇ ₹15 ಕೋಟಿ ಟೆಂಡರ್ ನೀಡಲಾಗಿದ್ದು, ಒಟ್ಟು ₹41 ಕೋಟಿಯನ್ನು ಕೆ.ಎಚ್.ಬಿ ಕಾಲೋನಿಯ 3 ನೇ ವಾರ್ಡ್ ಅಭಿವೃದ್ಧಿಗೆ ನೀಡಲಾಗಿದೆ. ಆದರೆ ಕೆಲವು ಪ್ರದೇಶಗಳು ಸಿಬಿಐ ಪ್ರಕರಣದಲ್ಲಿ ಇರುವುದರಿಂದ ಆ ಭಾಗಗಳಲ್ಲಿ ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ.

“ಮಳೆಯನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ. ಇವತ್ತಿನ ಕೆ.ಎಚ್.ಬಿ ಕಾಲೋನಿ ಪರಿಸ್ಥಿತಿಯನ್ನು ಅವಲೋಕಿಸಿ, ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು. ₹41 ಕೋಟಿ ಅಲ್ಲದೆ ಈಗ ಉಂಟಾಗಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಂದಾಯ ಇಲಾಖೆ, ನಗರಸಭೆಯಿಂದ ಬರುವ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಮಳೆಯಿಂದಾಗಿ ರಾಜ್ಯದಲ್ಲಿ 13 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಮಂಡ್ಯ ಜಿಲ್ಲೆಯೊಂದರಲ್ಲೇ ಸುಮಾರು 80 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಮಳೆ ನಿಂತ ನಂತರ ಸರ್ವೇ ನಡೆಸಿ ನಿಖರವಾದ ಬೆಳೆ ಹಾನಿಯ ಕುರಿತಾಗಿ ಮಾಹಿತಿ ನೀಡಲಾಗುವುದು” ಎಂದು ತಿಳಿಸಿದರು.

ಜೆಎಸ್ಎಸ್ ಪಬ್ಲಿಕ್ ಸ್ಕೂಲ್, ಶಾಲಾ ಮೈದಾನ, ವಾಹನಗಳು ಮುಳುಗಿದ್ದು ಆಡಳಿತ ಮಂಡಳಿ ಶಾಲೆಗೆ ರಜೆ ನೀಡಿದ್ದವು. ಅಸ್ತವ್ಯಸ್ತಗೊಂಡ ಜನಜೀವನದಲ್ಲಿ ಸುಧಾರಿಕೆ ಕಂಡಿಲ್ಲ. ಮಳೆ ಮುಂದುವರೆದಿರುವುದರಿಂದ ಇನ್ನಷ್ಟು ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಜನ ಓಡಾಟ ಸಹಜವಾಗಿರದೆ ಪರದಾಡುವ ಪರಿಸ್ಥಿತಿ.
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆಯಲ್ಲಿ ಹರಿಯುವ ಸಿಡಿಎಸ್ ನಾಲೆ ಒಡೆದು ನೀರು ಜಮೀನಿಗೆ ನುಗ್ಗಿರುವುದರಿಂದ ರೈತರು ಬೆಳೆದ ಬೆಳೆಗೆ ಹಾನಿಯಾಗಿದೆ. ಸ್ಥಳಕ್ಕೆ ಸಚಿವರಾದ ಎನ್. ಚೆಲುವರಾಯಸ್ವಾಮಿ ಹಾಗೂ ಶಾಸಕ ರಮೇಶ್ ಬಂಡಿ ಸಿದ್ದೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿ, “ಭಾರಿ ಮಳೆ ಉಂಟಾಗಿರುವುದರಿಂದ ಸಿಡಿಎಸ್ ನಾಲೆ ಒಡೆದು ಕೃಷಿ ಬೆಳೆ ಹಾಗೂ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ. ಮಳೆ ನಿಂತ ನಂತರ ಜಂಟಿ ಸರ್ವೆ ನಡೆಸಿ ರೈತರ ಬೆಳೆ ಎಷ್ಟು ಹಾನಿಯಾಗಿದೆ ಎಂದು ತಿಳಿದುಕೊಂಡು ಅಂದೆ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸರ್ವೇ ನಂತರವೇ ಎಷ್ಟು ಎಕರೆ ಬೆಳೆ ನಾಶವಾಗಿದೆ” ಎಂದು ತಿಳಿಯಲು ಸಾಧ್ಯ ಎಂದರು.

“ಸಿಡಿಎಸ್ ನಾಲೆ ನೀರನ್ನು ನಿಲ್ಲಿಸಲಾಗಿದೆ. ಮಳೆ ನಿಂತ ನಂತರ ಒಡೆದ ನಾಲೆಯನ್ನು ಸರಿಪಡಿಸಲಾಗುವುದು. ಎನ್ ಡಿ ಆರ್ ಎಸ್ ನಲ್ಲಿ 1 ಹೆಕ್ಟೇರ್ ಮಳೆ ಆಶ್ರಿತ ಬೆಳೆಗಳಿಗೆ ₹8,500, ನೀರಾವರಿ ಆಶ್ರಿತ ಬೆಳೆಗಳಿಗೆ ₹17,000, ತೋಟಗಾರಿಕೆ ಬೆಳೆಗೆ ₹22,500ಗಳ ಪರಿಹಾರ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಂಟಾದ ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಗೆ ರೈತರ ಬೇಡಿಕೆಯಂತೆ ಎಲ್ಲಾ ಬಗೆಯ ಬೆಳೆಗಳಿಗೂ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ₹8500 ರೂಪಾಯಿ ನೀಡುವುದಾಗಿ ಘೋಷಣೆ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.

“ಜಂಟಿ ಸರ್ವೆ ನಡೆದ ತಕ್ಷಣ ಯಾರು ಕಾಯುವಂತಿಲ್ಲ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಿದ ಮಾರನೇ ದಿನಕ್ಕೆ ಪರಿಹಾರವನ್ನು ನೀಡಲಾಗುವುದು. ಈ ಪ್ರಕ್ರಿಯೆಯು ಮಳೆ ನಿಂತ ಒಂದು ವಾರದೊಳಗೆ ಮಾಡಲಾಗುತ್ತದೆ. ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದ್ದರೆ ವಿಮೆ ಹಣದ ಜೊತೆ ಸರ್ಕಾರದ ಪರಿಹಾರವನ್ನು ನೀಡಲಾಗುವುದು” ಎಂದು ಭರವಸೆ ನೀಡಿದರು.
ಪಾಂಡವಪುರ (ಮೇಲುಕೋಟೆ ವಿಧಾನಸಭಾ ಕ್ಷೇತ್ರ): ಭಾರೀ ಮಳೆಯಿಂದ ಮೇಲುಕೋಟೆ ಕ್ಷೇತ್ರದ ಗಡಿಯಲ್ಲಿರುವ ನಾಲೆಗೆ ಹಾನಿಯಾಗಿದ್ದು, 50 ಎಕರೆ ಪ್ರದೇಶದ ಹೊಲಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಜಿಲ್ಲಾಧಿಕಾರಿ ಕುಮಾರ್ ಮತ್ತು ತಹಸೀಲ್ದಾರ್ ಬಸವರಡ್ಡೆಪ್ಪ ರೋಣದ ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ರೈತರು ಹಾನಿಗೊಳಗಾದ ಬೆಳೆಯ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಅಧಿಕಾರಿಗಳಿಗೆ ಸೂಚನೆ ನೀಡಿ ಮಳೆ ಕಡಿಮೆಯಾದ ಬಳಿಕ ಸರ್ವೇ ನಡೆಸಿ ಬೆಳೆ ನಾಶ, ಹಾನಿ ಕುರಿತಾಗಿ ವರದಿ ಸಂಗ್ರಹಿಸಿ ಸಲ್ಲಿಸುವಂತೆ. ಕೂಡಲೇ ಪರಿಹಾರದ ವ್ಯವಸ್ಥೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಬಾಬು ರಮೇಶ್ ಬಂಡಿಸಿದ್ದೇಗೌಡ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ, ಶ್ರೀರಂಗಪಟ್ಟಣ ತಹಶೀಲ್ದಾರ್ ಚೇತನ ಯಾದವ್, ನೀರಾವರಿ ನಿಗಮದ ಎಸಿ ಇ. ರಘುರಾಮ್, ಕಾರ್ಯಪಾಲಕ ಇಂಜಿನಿಯರ್ ಕೃಷಿ ಇಲಾಖೆಯರ್ ಜಯಂತ್, ಜಂಟಿ ನಿರ್ದೇಶಕ ಅಶೋಕ್ ಸೇರಿದಂತೆ ಇನ್ನಿತರರು ಇದ್ದರು.
ಮಂಡ್ಯ: ತಾಲೂಕಿನ ಹೊಳಲು ಗ್ರಾಮದಲ್ಲಿ ಎರಡು ದಿನದಿಂದ ಬಿದ್ದ ಬಾರಿ ಮಳೆಗೆ ಮನೆಗಳು ಕುಸಿದು ಬಿದ್ದಿವೆ. ಮಳೆಯಿಂದ ಕೆರೆಕಟ್ಟೆಗಳು ತುಂಬಿ ಹರಿಯುತ್ತಿದ್ದು ಅಪಾಯದ ಮಟ್ಟ ಮೀರಿದೆ. ಹೊಳಲು ಗ್ರಾಮದ ಚಿಕ್ಕತಾಯಮ್ಮ ಲೇಟ್ ಎಚ್.ಸಿ.ದೊಡ್ಡೇಗೌಡರ ವಾಸದ ಮನೆ ಗೋಡೆ ಕುಸಿದು ಮನೆಯಲ್ಲಿರುವ ವಸ್ತುಗಳಿಗೆಲ್ಲ ಹಾನಿಯಾಗಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಸದರಿ ಗ್ರಾಮದ ಎಚ್ ಸಿ ತಿಮ್ಮೇಗೌಡ ಬಿನ್ ಚಿನ್ನಗಿರಿಗೌಡರ ಹಳೆಯ ವಾಸದ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಮಂಡ್ಯ ತಹಶೀಲ್ದಾರ್ ಎಚ್ ವಿಶ್ವನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಸ್ಥಳ ಭೇಟಿಯಲ್ಲಿ ರಾಜಸ್ವ ನಿರೀಕ್ಷಕ ಮನೋಹರ್, ಗ್ರಾಮ ಆಡಳಿತಾಧಿಕಾರಿ ಸಿ.ಗುಣಶೇಖರ್, ಸಹಾಯಕ ರಾಜೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್ .ಬಿ. ದೊಡ್ಡೇಗೌಡ, ಹಾಗೂ ಮಾಜಿ ಅಧ್ಯಕ್ಷರಾದ ಎಚ್. ಬಿ.ನಾಗರಾಜ್, ಮಂಡ್ಯ ಮುದ್ರಣಾಲಯ ನಿರ್ದೇಶಕರಾದ ಎಚ್.ಎಸ್ ನಂದೀಶ್, ಮಾಜಿ ಗ್ರಾಮ ಅಧ್ಯಕ್ಷ ಎಚ್.ಡಿ. ರವಿ ಇದ್ದರು.
ವಿಶೇಷ ವಿಡಿಯೋ ವೀಕ್ಷಿಸಿ: https://youtu.be/kH8ucP3bFrY?si=41n2jq-Mfznzb8xI

ಮಂಡ್ಯ ಜಿಲ್ಲೆಯಾದ್ಯಂತ ಒಂದೇ ದಿನದಲ್ಲಿ 53 ಮಿಲಿ ಮೀಟರ್ ಮಳೆಯಾಗಿದೆ. ಅಕ್ಟೋಬರ್.9 ರಿಂದ 10 ರವರೆಗೆ ವಾಡಿಕೆ ಮಳೆಯ ಪ್ರಮಾಣ 5.2 ಮಿ.ಮೀ. ಆದರೆ, ಪ್ರಸ್ತುತ ಸಾಲಿನಲ್ಲಿ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ 53.4 ಮಿ.ಮೀ ಮಳೆಯಾಗಿದೆ. ವಾಡಿಕೆಗಿಂತ ಅತ್ಯಧಿಕ ಮಳೆಯಾಗಿರುವುದರಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿ, ಸಮಸ್ಯೆ ಉದ್ಭವಿಸಲು ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಅಪ್ರಾಪ್ತ ಬಾಲಕಿ ಮೇಲಾದ ಕೃತ್ಯ ಖಂಡಿಸಿ ಪ್ರತಿಭಟನೆ
ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ 82.5 ಮಿ.ಮೀ ಶ್ರೀರಂಗಪಟ್ಟಣದಲ್ಲಿ ದಾಖಲಾಗಿದೆ. ಮದ್ದೂರು ತಾಲ್ಲೂಕಿನಲ್ಲಿ 76.3 ಮಿ.ಮೀ, ಕೃಷ್ಣರಾಜ ಪೇಟೆ ತಾಲ್ಲೂಕಿನಲ್ಲಿ 57.4 ಮಿ.ಮೀ, ಪಾಂಡವಪುರ ತಾಲ್ಲೂಕಿನಲ್ಲಿ 76.3 ಮಿ.ಮೀ, ನಾಗಮಂಗಲ ತಾಲ್ಲೂಕಿನಲ್ಲಿ 39.8 ಮಿ.ಮೀ ದಾಖಲಾದರೆ. ಅತಿ ಕಡಿಮೆ ಮಳೆ ಮಳವಳ್ಳಿ ತಾಲ್ಲೂಕಿನಲ್ಲಿ 33.4 ಮಿ.ಮೀ ದಾಖಲಾಗಿದೆ.
ಮಂಡ್ಯ ಜಿಲ್ಲೆಯ ಗ್ರಾಮಾಂತರದಿಂದ ನಗರದವರೆಗೆ ಮಳೆ ತನ್ನ ಆರ್ಭಟದಿಂದ ಜನಜೀವನವನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸಿದೆ. ಕೃಷಿ ನಾಶವಾಗಿರುವುದು ರೈತರ ಬದುಕಿಗೆ ಹೊಡೆತವಾಗಿದ್ದರೆ, ಮನೆಗಳು ಜಲಾವೃತವಾಗಿರುವುದು ಸಾರ್ವಜನಿಕರ ದೈನಂದಿನ ಜೀವನವನ್ನು ದುಸ್ತರಗೊಳಿಸಿದೆ. ಈ ಪರಿಸ್ಥಿತಿ ಕೇವಲ ಪ್ರಕೃತಿ ವಿಕೋಪವಲ್ಲ, ಮೂಲಸೌಕರ್ಯಗಳ ದುರ್ಬಲತೆ ಹಾಗೂ ಯೋಜಿತ ನೀರು ನಿರ್ವಹಣೆಯ ಕೊರತೆಯನ್ನೂ ಬಯಲಿಗೆಳೆಯುತ್ತದೆ.
ಭವಿಷ್ಯದಲ್ಲಿ ಇಂತಹ ಅವಘಡಗಳನ್ನು ತಪ್ಪಿಸಲು ನಾಲೆ-ಹೊಳೆಗಳ ದುರಸ್ತಿ, ಸಮರ್ಪಕ ಒಳಚರಂಡಿ ವ್ಯವಸ್ಥೆ, ನಗರ ಯೋಜನೆಯ ಪುನರ್‌ವಿಮರ್ಶೆ ಮತ್ತು ತ್ವರಿತ ಪರಿಹಾರ ಕಾರ್ಯತಂತ್ರಗಳನ್ನು ಬಲಪಡಿಸುವುದು ಅಗತ್ಯ. ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ತಕ್ಷಣ ಪರಿಹಾರ ಒದಗಿಸುವುದು ಮಾತ್ರವಲ್ಲದೆ, ದೀರ್ಘಕಾಲೀನ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ.





